ಕುಲಗೋಡ ತಮ್ಮಣ್ಣ ಪಾರಿಜಾತ ತರಬೇತಿ ಕೇಂದ್ರ ಸ್ಥಾಪಿತವಾಗಬೇಕು : ಡಾ.ಶ್ರೀರಾಮ ಇಟ್ಟಣ್ಣವರ

Chandrashekar Pattar
ಕುಲಗೋಡ ತಮ್ಮಣ್ಣ ಪಾರಿಜಾತ ತರಬೇತಿ ಕೇಂದ್ರ ಸ್ಥಾಪಿತವಾಗಬೇಕು : ಡಾ.ಶ್ರೀರಾಮ ಇಟ್ಟಣ್ಣವರ
WhatsApp Group Join Now
Telegram Group Join Now

ಮೂಡಲಗಿ : ಪಾರಿಜಾತಕ್ಕೆ ಬುನಾದಿ ಹಾಕಿದ ಕುಲಗೋಡ ತಮ್ಮಣ್ಣನವರ ಹೆಸರಿನಲ್ಲಿ ಪಾರಿಜಾತ ತರಬೇತಿ ಕೇಂದ್ರ ಸ್ಥಾಪಿಸಿ, ಉತ್ತರ ಕರ್ನಾಟಕದ ಪಾರಿಜಾತ ಕಲೆಗೆ ಸರ್ಕಾರ ಪ್ರೋತ್ಸಾಹ ನೀಡಬೇಕು ಎಂದು ಡಾ.ಶ್ರೀರಾಮ ಇಟ್ಟಣ್ಣವರ ಅಭಿಪ್ರಾಯ ಪಟ್ಟರು.

ಶುಕ್ರವಾರದಂದು ತಾಲೂಕಿನ ಕುಲಗೋಡ ಗ್ರಾಮದಲ್ಲಿ ಪಾರಿಜಾತ ಪಿತಾಮಹ ಕುಲಗೋಡ ತಮ್ಮಣ್ಣ ಪ್ರತಿಷ್ಠಾನದಿಂದ ಶ್ರೀ ಬಲಭೀಮದೇವರ ಕಾರ್ತಿಕೋತ್ಸದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ 18ನೇ ವರ್ಷದ ಪಾರಿಜಾತ ಉತ್ಸವ-2025 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಕುಲಗೋಡ ತಮ್ಮಣ್ಣವರು ಅದ್ಭುತ ಕಲಾವಿದರಲ್ಲದೇ ಕವಿತ್ವವನ್ನೂ ಹೊಂದಿದ್ದರು. 18ನೇ ಶತಮಾನದಲ್ಲಿ ಶ್ರೀಕೃಷ್ಣ ಪಾರಿಜಾತ ರಚಿಸಿದ ಕುಲಗೋಡ ತಮ್ಮಣ್ಣನವರು ಪಾರಿಜಾತವನ್ನೇ ತಮ್ಮ ಉಸಿರನ್ನಾಗಿಸಿಕೊಂಡಿದ್ದರು ಎಂದು ಹೇಳಿದರು.

ಅತಿಥಿಯಾಗಿ ಆಗಮಿಸಿದ್ದ ಬಸನಗೌಡ ಪಾಟೀಲ್ ಮಾತನಾಡಿ, ನಮ್ಮ ಪಾರಿಜಾತ ನಮ್ಮ ಹೆಮ್ಮೆ, ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿರುವ ಪಾರಿಜಾತದ ಕತೃವಾದ ಕುಲಗೋಡ ತಮ್ಮಣ್ಣವರ ಮೂರ್ತಿಯ ಪ್ರತಿಷ್ಠಾಪಣಾ ಕಾರ್ಯವನ್ನು, ಎಲ್ಲ ಗ್ರಾಮಸ್ಥರ ವಿಶ್ವಾಸ ಹಾಗೂ ಶಾಸಕರ ಮಾರ್ಗದರ್ಶನಲ್ಲಿ ಆದಷ್ಟು ಬೇಗ ಗ್ರಾಮದಲ್ಲಿ ನೆರವೇರಿಸಲಾಗುವುದು ಎಂದು ಆಶ್ವಾಸನೆ ನೀಡಿದರು.

ಶ್ರೀ ಬಲಭೀಮ ದೇವರ ಪ್ರಧಾನ ಅರ್ಚಕರಾದ ಶ್ರೀ ಭೀಮಪ್ಪ. ರಾ. ಪೂಜೇರರವರು, ಶ್ರೀ ಬಲಭೀಮ ಕೃಪಾಪೋಷಿತ ಕುಲಗೋಡ ತಮ್ಮಣ್ಣ ಶ್ರೀಕೃಷ್ಣ ಪಾರಿಜಾತ ಕಂಪನಿ ನಾಮ ಫಲಕವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ, ನೂತನವಾಗಿ ಸ್ಥಾಪಿತವಾದ ಶ್ರೀಕೃಷ್ಣ ಪಾರಿಜಾತ ಕಂಪನಿಯಿಂದ ನೂರಾರು ಕಲಾವಿದರು ಬೆಳಕಿಗೆ ಬಂದು, ಪಾರಿಜಾತ ವಿಶ್ವ ವಿಖ್ಯಾತವಾಗಲಿ ಎಂದು ಶುಭ ಹಾರೈಸಿದರು. ಪಾರಿಜಾತ ಉತ್ಸವ ಕಾರ್ಯಕ್ರಮವನ್ನು ಅಶೋಕ ನಾಯಿಕ ಉದ್ಘಾಟಿಸಿದರು ಹಾಗೂ ಪಾರಿಜಾತ ಪಿತಾಮಹ ಕುಲಗೋಡ ತಮ್ಮಣ್ಣ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ರಮೇಶ್ ಲವಪ್ಪ ಕೌಜಲಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ವೇದಿಕೆಯಲ್ಲಿ ಗ್ರಾಮ ಪಂ. ಅಧ್ಯಕ್ಷರಾದ ತಮ್ಮಣ್ಣ ದೇವರ, ಶ್ರೀಕಾಂತ ನಾಯಕ, ಅಶೋಕ್ ನಾಯಕ, ಡಾ.ಬಿ.ವಿ.ದೇವರ ದಂಪತಿಗಳು, ಸತೀಶ್ ವಂಟಗೋಡಿ, ಸುನಿಲ್ ವಂಟಗೋಡಿ, ದತ್ತಾತ್ರೇಯ ಕುಲಕರ್ಣಿ, ಶ್ರೀಪತಿ ಗಣಿ, ಡಾ.ಮಹೇಶ ಕಂಕಣವಾಡಿ, ಜಗದೀಶ ಗಿಡ್ಡಾಳಿ, ಶಿವನಗೌಡ ಪಾಟೀಲ್, ಪ್ರಕಾಶ ಅರಳಿ ಸೇರಿದಂತೆ ಗ್ರಾಮದ ಹಲವಾರು ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಮುತ್ತಪ್ಪ ಜಿಡ್ಡಿಮನಿ ನಿರೂಪಿಸಿ, ಬಲರಾಮ ತಟ್ಟಿಯವರು ವಂದಿಸಿದರು.

ನಂತರ ಶ್ರೀ ಬಲಭೀಮ ಕೃಪಾಪೋಷಿತ ಕುಲಗೋಡ ತಮ್ಮಣ್ಣ ಬಯಲಾಟ ಕಂಪನಿಯ ಕಲಾವಿದರು ರಮೇಶ ಲವಪ್ಪ ಕೌಜಲಗಿಯವರ ನಿರ್ದೇಶನದಲ್ಲಿ ಶ್ರೀಕೃಷ್ಣ ಪಾರಿಜಾತ ಪ್ರದರ್ಶನ ಮಾಡಿದರು.

WhatsApp Group Join Now
Telegram Group Join Now
Share This Article