ಬಳ್ಳಾರಿ ಜುಲೈ 25 : ಕುಡಿತಿನಿ ಹರಗಿನ ಡೋಣಿ, ಸಿದ್ದಮ್ಮನಹಳ್ಳಿ ಸೇರಿದಂತೆ ತಾಲೂಕಿನ ಏಳು ಗ್ರಾಮಗಳ 12,500 ಎಕರೆ ಜಮೀನನ್ನು ಕೆ ಐ ಎ ಡಿ ಬಿ ಮೂಲಕ ರೈತರಿಂದ ಬಲವಂತವಾಗಿ ಸ್ವಾಧೀನಪಡಿಸಿಕೊಂಡಿರುವುದನ್ನು ಸಂಘಟನೆಯಿಂದ ಬಲವಾಗಿ ಖಂಡಿಸುತ್ತಾ ನ್ಯಾಯಯುತ ಭೂಬೆಲೆಗಾಗಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಸಂಘಟನೆಯ ಗೌರವಾಧ್ಯಕ್ಷ ಯು ಬಸವರಾಜ್ ತಿಳಿಸಿದರು.
ಅವರು ಇಂದು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿ ಮಾತನಾಡಿ, ಬ್ರಹ್ಮಣಿ ಮಿತ್ತಲ್ ಏನ್ ಎಂ ಡಿ ಸಿ ಸೇರಿದಂತೆ ಮೂರು ಕಂಪನಿಗಳು ರೈತರಿಂದ ಬಲವಂತವಾಗಿ ಜಮೀನನ್ನು ಸ್ವಾಧೀನ ಪಡಿಸಿಕೊಂಡು ಅವರಿಗೆ ಕೇವಲ ಎಂಟು, ಹತ್ತು ಹನ್ನೆರಡು ಲಕ್ಷದ ಪ್ರಕಾರ ಅತ್ಯಲ್ಪವಾದ ಬೆಲೆಯನ್ನು ನೀಡಿರುತ್ತದೆ, ಈ ರೈತರಿಗೆ ನ್ಯಾಯಯುತವಾದ ಭೂ ಬೆಲೆಯನ್ನು ನೀಡಬೇಕೆಂದು ನಾವು ಈಗಾಗಲೇ 950 ದಿನಗಳಿಂದ ಪ್ರತಿಭಟನಾ ಧರಣಿಯನ್ನು ನಡೆಸುತ್ತಾ ಬಂದಿರುತ್ತೇವೆ, ಸಂಡೂರು ಉಪಚುನಾವಣೆ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ನಮ್ಮ ಹೋರಾಟದ ಸ್ಥಳಕ್ಕೆ ಬಂದು ನಿಮಗೆ ಅನ್ಯಾಯವಾಗಿದೆ ಅದನ್ನು ಸರಿಪಡಿಸುತ್ತೇನೆ ಎಂದು ಹೇಳಿ ಹೋಗಿದ್ದರು. ಆದರೆ ಇಲ್ಲಿಯವರೆಗೂ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ. ಮತ್ತು ಜಿಲ್ಲಾ ನ್ಯಾಯಾಲಯದ ಆದೇಶದ ಪ್ರಕಾರವಾದರೂ ಹಣವನ್ನು ನೀಡಿ ಇಲ್ಲವಾದಲ್ಲಿ ನಿಮಗೆ ಬೇಕಾದ ಐದರಿಂದ ಆರು ಸಾವಿರ ಎಕರೆ ಜಮೀನನ್ನು ಉಳಿಸಿಕೊಂಡು ಅಭಿವೃದ್ಧಿಪಡಿಸಿಸಿದ ಜಮೀನನ್ನು ನಮಗೆ ವಾಪಸ್ ನೀಡಿ ಎಂದು ಸರ್ಕಾರ ಮತ್ತು ಕೆಇಡಿಬಿ ಅಧಿಕಾರಿಗಳನ್ನು ಒತ್ತಾಯಿಸಿದರು.
ನಮ್ಮ ಹೋರಾಟ ಯಾವುದೇ ಅಧಿಕಾರಿ ಅಥವಾ ಸರ್ಕಾರದ ವಿರುದ್ಧವಲ್ಲ ಕಾರ್ಪೊರೇಟರ್ ಕಂಪನಿ ಮತ್ತು ರೈತರ ಹೋರಾಟವಾಗಿದೆ, ಸರ್ಕಾರ
ಹೀಗೆ ನಮ್ಮ ಕೂಗನ್ನು ಕೇಳಿಸಿಕೊಳ್ಳದೆ ನಿರ್ಲಕ್ಷ ಧೋರಣೆ ತಳೆದಲ್ಲಿ ಮುಂದಿನ ತಿಂಗಳು ಹನ್ನೊಂದರಿಂದ ನಮ್ಮ ಹೋರಾಟವನ್ನು ತೀವ್ರ ಗೊಳಿಸಲಾಗುವುದು, ಪ್ರಥಮವಾಗಿ ಎಂಎಲ್ಎ ಮನೆಗಳ ಮುಂದೆ ಧರಣಿ ನಡೆಸಲಾಗುವುದು ಮತ್ತು ಎಲ್ಲಾ ಸಂಘ ಸಂಸ್ಥೆಗಳನ್ನು ಸಹಕಾರದೊಂದಿಗೆ ರೈತರ ಸಮ್ಮುಖದಲ್ಲಿ ಬಂದ್ ಆಚರಣೆಯನ್ನು ನಡೆಸುವುದು, ಸರ್ಕಾರ ಅದಕ್ಕೂ ಜಗ್ಗದಿದ್ದಾಗ ಸುಮಾರು 3000 ಜನ ರೈತರೊಂದಿಗೆ ಬೆಂಗಳೂರಿಗೆ ಪಾದಯಾತ್ರೆ ಕೈಗೊಂಡು ಫ್ರೀಡಂ ಪಾರ್ಕ್ ನಲ್ಲಿ ಭಾರಿ ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ಸರ್ಕಾರವನ್ನು ಎಚ್ಚರಿಸಿದರು.
ಈ ಸುದ್ದಿಗೋಷ್ಠಿಯಲ್ಲಿ, ಸತ್ಯಬಾಬು, ಸಿದ್ದಲಿಂಗಪ್ಪ ರಮೇಶ್ ಸೇರಿದಂತೆ ಏಳು ಗ್ರಾಮಗಳ ಹಲವಾರು ರೈತರಿದ್ದರು.