ಬೆಂಗಳೂರು, ಏಪ್ರಿಲ್ 10: ಯುಗಾದಿ, ಗೌರಿ- ಗಣೇಶ, ದಸರಾ, ದೀಪಾವಳಿ, ಸಂಕ್ರಾಂತಿ… ಹೀಗೆ ಹಬ್ಬಗಳ ಸೀಸನ್ ಬಂತು ಅಂದರೆ ಖಾಸಗಿ ಬಸ್ ಮಾಲೀಕರಿಗೆ ಭರ್ಜರಿ ಲಾಟರಿ. ಸಿಕ್ಕಿದ್ದೇ ಚಾನ್ಸ್ ಎಂದು ಜನರಿಂದ ದುಪ್ಪಟ್ಟು ವಸೂಲಿಗೆ ಇಳಿದು ಬಿಡುತ್ತಾರೆ. ರಜೆ ಅಂತ ಮನೆ ಕಡೆ ಹೊರಟವರ ಜೇಬಿಗೆ ಗುನ್ನ ಇಡುತ್ತಾರೆ. ಹೀಗೆ ಅವಕಾಶ ಸಿಕ್ಕಗಾಲೆಲ್ಲ ದರ ಏರಿಸುವ ಪ್ರವೇಟ್ ಬಸ್ ಮಾಲೀಕರು, ಈ ಬಾರಿಯೂ ವಸೂಲಿಗೆ ಮುಂದಾಗಿದ್ದಾರೆ. ಈ ಬಾರಿ ಸಾಲಾಗಿ ನಾಲ್ಕೈದು ದಿನ ರಜೆ ಸಿಕ್ಕಿದ್ದು ಜನ ತಮ್ಮ ತಮ್ಮ ಊರಿನ ಕಡೆ ಮುಖ ಮಾಡಿದ್ದಾರೆ. ಇಂದು (ಗುರುವಾರ) ಮಹಾವೀರ ಜಯಂತಿ, ಶುಕ್ರವಾರ ಒಂದು ದಿನ ರಜೆ ಹಾಕಿಕೊಂಡರೆ ಶನಿವಾರ ಸೆಕೆಂಡ್ ಸ್ಯಾಟರ್ಡೇ ಮತ್ತು ಹನುಮಜಯಂತಿ ರಜೆ, ಭಾನುವಾರ ಹೇಗೂ ರಜೆ ಸಿಗುತ್ತದೆ. ಸೋಮವಾರ ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ. ಸರ್ಕಾರಿ ರಜೆ. ಅಲ್ಲಿಗೆ ಶುಕ್ರವಾರ ಒಂದು ದಿನ ರಜೆ ಹಾಕಿಕೊಂಡರೆ ಐದು ದಿನ ರಜೆ ಸಿಗುತ್ತದೆ. ಈ ಹಿನ್ನೆಲೆ ಜನ ಬೆಂಗಳೂರಿನಿಂದ ಊರಿಗೆ ಹೋಗಲು ಮುಂದಾಗುತ್ತಿದ್ದಾರೆ.
ಕೆಸ್‌ಆರ್‌ಟಿಸಿ, ಖಾಸಗಿ ಬಸ್‌ಗಳ ದರ ಏರಿಕೆ: ಬೆಂಗಳೂರಿನಿಂದ ಊರುಗಳಿಗೆ ಹೊರಟವರಿಗೆ ಶಾಕ್

ಆದರೆ ಖಾಸಗಿ ಬಸ್ ದರ ದುಪ್ಪಟ್ಟು ಆಗಿರುವುದು ಊರಿಗೆ ಹೊರಟವರಿಗೆ ಶಾಕ್ ನೀಡಿದೆ. ಇದಕ್ಕೆ ಜನ ಆಕ್ರೋಶ ವ್ಯಕ್ತಪಡಿದ್ದಾರೆ. ಮಂಗಳವಾರ ದೇವದುರ್ಗದಿಂದ ಬೆಂಗಳೂರಿಗೆ ಖಾಸಗಿ ಬಸ್ನಲ್ಲಿ 750 ರುಪಾಯಿ ಟಿಕೆಟ್ ದರ ಇತ್ತು. ಗುರುವಾರ ಆನ್ಲೈನ್ನಲ್ಲಿ 2 ಸಾವಿರ ರುಪಾಯಿ ತೋರಿಸುತ್ತಿದೆ ಎಂದು ಪ್ರಯಾಣಿಕರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.