ಬೆಂಗಳೂರು: ಪ್ರಸಿದ್ಧ ಮೈಸೂರು ಸ್ಯಾಂಡಲ್ ಸೋಪ್ ತಯಾರಕರಾದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (ಕೆಎಸ್‌ಡಿಎಲ್) ಕಳೆದ 40 ವರ್ಷಗಳಲ್ಲಿ ಅತ್ಯಧಿಕ ಮಾರಾಟ ವಹಿವಾಟು ದಾಖಲಿಸಿದ್ದು, ಮಾರ್ಚ್ 2024 ರ ವೇಳೆಗೆ 1,500 ಕೋಟಿ ರೂ.ಗಳನ್ನು ಮೀರಿದೆ. ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮಾರಾಟದಲ್ಲಿ 195 ಕೋಟಿ ರೂ.ಏರಿಕೆಯಾಗಿದೆ. ಇದು ಶೇಕಡಾ 14.25 ರಷ್ಟು ಬೆಳವಣಿಗೆಯಾಗಿದೆ.
ಶವರ್ ಜೆಲ್‌ಗಳು, ಮೈಸೂರು ಸ್ಯಾಂಡಲ್ ವೇವ್ ಡಿಯೋ ಸೋಪ್, ಗ್ಲಿಸರಿನ್ ಆಧಾರಿತ ಪಾರದರ್ಶಕ ಬಾತಿಂಗ್ ಬಾರ್ ಮತ್ತು ಸೂಪರ್ ಪ್ರೀಮಿಯಂ ಬಾತ್ ಸೋಪ್, ಸೇರಿದಂತೆ 21 ಹೊಸ ಉತ್ಪನ್ನಗಳ ಬಿಡುಗಡೆ ಕಂಪನಿಗೆ ಹೆಚ್ಚಿನ ವಹಿವಾಟು ನಡೆಸಲು ನೆರವಾಗಿದೆ. ತನ್ನ ಸಾಬೂನುಗಳಲ್ಲಿ ಶುದ್ಧ ಶ್ರೀಗಂಧದ ಎಣ್ಣೆಯನ್ನು ಬಳಸುವುದಕ್ಕೆ ಹೆಸರುವಾಸಿಯಾದ ಕಂಪನಿಯು ಯುವಕರ ಬೇಡಿಕೆ ಮತ್ತು ಆದ್ಯತೆಗಳನ್ನು ಪೂರೈಸಲು ಮತ್ತು ಉತ್ತರ ಭಾರತದಲ್ಲಿ ನೆಲೆಯೂರಲು ಪ್ರಯತ್ನಿಸಿದೆ.
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ KSDL ಅಧಿಕಾರಿಗಳು, ಗ್ಲಿಸರಿನ್ ಆಧಾರಿತ ಉತ್ಪನ್ನಗಳಿಗೆ ಪ್ರತ್ಯೇಕ ಸೋಪ್ ಬೇಸ್ ಸಿದ್ಧಪಡಿಸಲಾಗುತ್ತಿದೆ. ಈ ಸೋಪ್ ಗಳ ತಯಾರಿಗೆ ಹೊಸ ತಂತ್ರಜ್ಞಾನಗಳ ಅಗತ್ಯವಿದ್ದು, ಕಂಪನಿ ಯಂತ್ರೋಪಕರಣಗಳನ್ನು ಖರೀದಿಸಿದೆ ಎಂದು ತಿಳಿಸಿದರು.
ಬೆಂಗಳೂರು ಹೊರತುಪಡಿಸಿ ಮೈಸೂರು ಮತ್ತು ಶಿವಮೊಗ್ಗದಲ್ಲಿ ಹೊಸ ಘಟಕಗಳನ್ನು ಸ್ಥಾಪಿಸಲು ಯೋಜಿಸಲಾಗಿದೆ. ಕೆಎಸ್‌ಡಿಎಲ್‌ನ ಮಾರುಕಟ್ಟೆ ಪಾಲು ಶೇ. 2. 5 ರಷ್ಟಿರುವ ಉತ್ತರ ಭಾರತದ ರಾಜ್ಯಗಳ ಮೇಲೆ ಕೇಂದ್ರೀಕರಿಸಲು ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂ.ಬಿ.ಪಾಟೀಲ್ ಆಯ್ಕೆ ಮಾಡಿದ್ದಾರೆ. “ಕೆಎಸ್‌ಡಿಎಲ್‌ನ ಹೆಚ್ಚಿನ ಮಾರಾಟವು ಪ್ರಸ್ತುತ ದಕ್ಷಿಣದ ರಾಜ್ಯಗಳಿಂದ ಬಂದಿದೆ, ಅಲ್ಲಿ ಅದು ಶೇ. 81 ರಷ್ಟಿದೆ ಎಂದು ಕೆಎಸ್‌ಡಿಎಲ್ ಎಂಡಿ ಡಾ.ಪ್ರಶಾಂತ್ ಪಿಕೆಎಂ ಹೇಳಿದರು.
ಮೈಸೂರು ಸ್ಯಾಂಡಲ್ ವೇವ್ ಅರಿಶಿನ ಸೋಪ್ ನ್ನು ಉತ್ತಮ ಗುಣಮಟ್ಟದ ಸಸ್ಯಜನ್ಯ ಎಣ್ಣೆ ಮತ್ತು ನೈಸರ್ಗಿಕ ಅರಿಶಿನದಿಂದ ರಚಿಸಲಾಗಿದೆ ಎಂದು ಅವರು ತಿಳಿಸಿದರು.