ಮೇ.20ರಂದು 1 ಲಕ್ಷ ಕುಟುಂಬಗಳಿಗೆ ಹಕ್ಕು ಪತ್ರ: ಕೃಷ್ಣಬೈರೇಗೌಡ

Ravi Talawar
ಮೇ.20ರಂದು 1 ಲಕ್ಷ ಕುಟುಂಬಗಳಿಗೆ ಹಕ್ಕು ಪತ್ರ: ಕೃಷ್ಣಬೈರೇಗೌಡ
WhatsApp Group Join Now
Telegram Group Join Now
ಬಳ್ಳಾರಿ13: ರಾಜ್ಯದಲ್ಲಿ ಕಂದಾಯ ಗ್ರಾಮಗಳಾಗಿ ಘೋಷಣೆಯಾದರೂ ಸಂಪೂರ್ಣ ಅನುಷ್ಠಾನಕ್ಕೆ ಬಾರದ ಜನವಸತಿ ಪ್ರದೇಶಗಳ ೧ ಲಕ್ಷ ಕುಟುಂಬಗಳಿಗೆ ಹಕ್ಕು ಪತ್ರ ನೀಡುವ ಮೂಲಕ ಪೂರ್ಣ ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲಾಗುತ್ತದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಹೇಳಿದರು.
ಬಳ್ಳಾರಿಯಲ್ಲಿ ಕಂದಾಯ ಇಲಾಖೆ ಪ್ರಗತಿ ಪರಿಶೀಲನೆ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯದಲ್ಲಿ ಶತಮಾನಗಳಿಂದ ಕೆಲವು ಹಾಡಿ, ಹಟ್ಟಿ, ತಾಂಡಗಳಲ್ಲಿ ಜನರು ವಾಸವಿದ್ದರೂ ದಾಖಲೆ ಇರದ ಕಾರಣ ಅವರಿಗೆ ಸರಕಾರದ ಯಾವುದೇ ಸೌಲಭ್ಯ ಸಿಗುತ್ತಿರಲಿಲ್ಲ. ದಾಖಲೆ ರಹಿತ ಅಂತಹ ವಸತಿ ಪ್ರದೇಶಗಳನ್ನು ಗುರುತಿಸಲಾಗಿದೆ. ಈ ಹಿಂದೆ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ  ಈ ಯೋಜನೆ ಜಾರಿ ಮಾಡಲಾಗಿತ್ತು. ೩೬ಸಾವಿರ ಕುಟುಂಬಗಳಿಗೆ ಹಕ್ಕು ಪತ್ರ ವಿತರಣೆ ಮಾಡಲಾಗಿತ್ತು. ಆದರೆ ಹಿಂದಿನ ಬಿಜೆಪಿ ಸರಕಾರ ಇದನ್ನು ಪೂರ್ಣ ಮಾಡಿರಲಿಲ್ಲ. ೭೦ಸಾವಿರ ಕುಟುಂಬಗಳಿಗೆ ಬಿಜೆಪಿ ಸರಕಾರದಲ್ಲಿ ಹಕ್ಕುಪತ್ರ ವಿತರಣೆ ಮಾಡಿತ್ತು. ಈಗ ಪುನಃ ನಾವೇ ಅಧಿಕಾರಕ್ಕೆ ಬಂದಿದ್ದು ಸುಮಾರು ೧.೫೦ ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ ಬಾಕಿ ಇದೆ. ಈಗ ಮೇ.೨೦ರಂದು ಇಂತಹ ೧ ಲಕ್ಷ ಕುಟುಂಬಗಳಿಗೆ ಹೊಸಪೇಟೆಯಲ್ಲಿ ನಡೆಯುವ ಸಾಧನಾ ಸಮಾವೇಶದಲ್ಲಿ ಹಕ್ಕು ಪತ್ರ ವಿತರಣೆ ಮಾಡಲಾಗುವುದು ಎಂದರು.
ಪೋಡಿ ಅಭಿಯಾನ: ರಾಜ್ಯದಲ್ಲಿ ರೈತರು, ಬಡ ಕುಟುಂಬಗಳಿಗೆ ಸರಕಾರಿ ಜಮೀನು ಹಂಚಿಕೆಯಾಗಿದ್ದರೂ ಅಂತಹ ಜಮೀನುಗಳನ್ನು ಇನ್ನು ರೈತರ ಹೆಸರಿಗೆ ಪಟ್ಟಾ ಆಗಿಲ್ಲ. ಹೀಗಾಗಿ ಇಂತಹ ಜಮೀನು ಸರ್ವೆ ಮಾಡಲಾಗಿದ್ದು ಸದ್ಯ ೩೦ಸಾವಿರ ರೈತರಿಗೆ ಪೋಡಿ ಆಗಿಲ್ಲ ಎನ್ನುದು ಗೊತ್ತಾಗಿದೆ. ಪೋಡಿ ಅಭಿಯಾನದ ಮೂಲಕ ರೈತರಿಗೆ ಪಟ್ಟಾ ಮಾಡಿಕೊಡಲಾಗುವುದು ಎಂದ ಸಚಿವರು ಶತಮಾನಗಳಿಂದ ಕಂದಾಯ ಇಲಾಖೆಯಲ್ಲಿನ ದಾಖಲೆಗಳು ಕಳೆದು ಹೋಗುವ ದೂರುಗಳಿದ್ದವು. ಹೀಗಾಗಿ ಎಲ್ಲ ದಾಖಲೆಗಳನ್ನು ಡಿಜಿಟಲೀಕರಣ ಮಾಡಲಾಗುತ್ತಿದೆ. ರಾಜ್ಯಾದ್ಯಂತ ೨೦ ಕೋಟಿ ಪುಟಗಳ ದಾಖಲೆಗಳನ್ನು ಈಗಾಗಲೇ ಡಿಜಿಟಲೀಕರಣ ಮಾಡಲಾಗಿದೆ ಎಂದು ವಿವರಿಸಿದರು.
ಪೌತಿ ಅಭಿಯಾನ: ರಾಜ್ಯದಲ್ಲಿ ೫೨ ಲಕ್ಷಕ್ಕೂ ಹೆಚ್ಚು ಪ್ರಕರನ ಪೌತಿ ಆಗದೇ ಬಾಕಿ ಉಳಿದಿವೆ. ಬಳ್ಳಾರಿ ಜಿಲ್ಲೆಯೊಂದರಲ್ಲೇ ಸುಮಾರು ೭೦ಸಾವಿರ ಇಂತಹ ಪ್ರಕರಣಗಳಿವೆ. ಇವುಗಳನ್ನು ವಿಲೇವಾರಿ ಮಾಡಲು ಕಾಲಮಿತಿ ನಿಗದಿ ಮಾಡಲಾಗಿದೆ. ಇದಕ್ಕಾಗಿ ಪೌತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತಿದೆ. ಜಿಲ್ಲಾ, ತಾಲೂಕು ಕೇಂದ್ರಗಳಲ್ಲೂ ಪೌತಿ ಅಭಿಯಾನವನ್ನು ಯಶಸ್ವಿಯಾಗಿ ಜಾರಿಗೊಳಿಸಲು ನಿರ್ದೇಶನ ನೀಡಲಾಗಿದೆ ಎಂದು ಸಚಿವ ಕೃಷ್ಣಬೈರೇಗೌಡ ಹೇಳಿದರು.
WhatsApp Group Join Now
Telegram Group Join Now
Share This Article