ಬಳ್ಳಾರಿ, ಮಾ.3: ರಾಜ್ಯದಲ್ಲಿ ಒಳ ಮೀಸಲಾತಿ ಜಾರಿಗೊಳಿಸಿ ಖಾಲಿ ಇರುವ ಸರ್ಕಾರಿ ಹುದ್ದೆಗಳ ನೇಮಕಾತಿಯನ್ನು ತಕ್ಷಣ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ Siddaramaiah ಹಾಗೂ ಉಪ ಮುಖ್ಯಮಂತ್ರಿ D. K. Shivakumar ಅವರಿಗೆ ಕೆಪಿಸಿಸಿ ರಾಜ್ಯ ಮಾಧ್ಯಮ ವಕ್ತಾರ ಹಾಗೂ ಪ್ರಚಾರ ಸಮಿತಿ ಸಂಯೋಜಕ ವೆಂಕಟೇಶ್ ಹೆಗಡೆ ಮನವಿ ಮಾಡಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಸಂವಿಧಾನಬದ್ಧ ಆಶಯಗಳನ್ನು ಈಡೇರಿಸುವ ಮಹತ್ವದ ಕ್ರಮವಾಗಿದ್ದು, ಅತೀ ಹಿಂದುಳಿದ ಸಮುದಾಯಗಳ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಪ್ರಗತಿಗೆ ಇದು ಅನಿವಾರ್ಯ ಎಂದು ಹೇಳಿದ್ದಾರೆ.
ಪರಿಶಿಷ್ಟ ಜಾತಿಗಳಿಗೆ ನೀಡಲಾದ ಮೀಸಲಾತಿ ಎಲ್ಲ ಜಾತಿಗಳಿಗೆ ಸಮಾನವಾಗಿ ತಲುಪಿಲ್ಲ. ಕೆಲವು ಜಾತಿಗಳು ಇನ್ನೂ ಅತೀ ಹಿಂದುಳಿದ ಸ್ಥಿತಿಯಲ್ಲೇ ಉಳಿದಿದ್ದು, ಶೈಕ್ಷಣಿಕ ಹಾಗೂ ಉದ್ಯೋಗಾವಕಾಶಗಳಲ್ಲಿ ಅವರ ಪ್ರತಿನಿಧಿತ್ವ ಕಡಿಮೆ ಇದೆ ಎಂದು ಅವರು ಗಮನಾರ್ಹ ಮಾಡಿದರು. ಇದೇ ವೇಳೆ ಕೆಲ ಜಾತಿಗಳು ಅಭಿವೃದ್ಧಿ ಕಂಡಿರುವ ಹಿನ್ನಲೆಯಲ್ಲಿ, ಜನಸಂಖ್ಯೆ ಆಧಾರಿತ ಒಳ ಮೀಸಲಾತಿ ನೀಡುವ ಬಗ್ಗೆ ಸರ್ವೋಚ್ಛ ನ್ಯಾಯಾಲಯ ನೀಡಿರುವ ತೀರ್ಪಿನ ಬೆಳಕಿನಲ್ಲಿ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ರಾಜ್ಯದಲ್ಲಿ ಖಾಲಿ ಇರುವ 56 ಸಾವಿರಕ್ಕೂ ಅಧಿಕ ಸರ್ಕಾರಿ ಹುದ್ದೆಗಳ ನೇಮಕಾತಿಯನ್ನು ಒಳ ಮೀಸಲಾತಿ ಅನ್ವಯ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ನ್ಯಾಯಾಲಯದ ಮಾರ್ಗದರ್ಶನದಂತೆ ಪರಿಶಿಷ್ಟ ಜಾತಿಗಳಿಗೆ ಶೇ.15 ಅಥವಾ ಶೇ.17 ಹಾಗೂ ಪರಿಶಿಷ್ಟ ಪಂಗಡಗಳಿಗೆ ಶೇ.3 ಅಥವಾ ಶೇ.7 ಮೀಸಲಾತಿ ಪ್ರಮಾಣದ ಆಧಾರದ ಮೇಲೆ ಒಳ ಮೀಸಲಾತಿ ಜಾರಿಗೊಳಿಸುವ ಬಗ್ಗೆ ಚಿಂತನೆ ನಡೆಯಬೇಕು ಎಂದು ಅವರು ತಿಳಿಸಿದರು.
ಒಳ ಮೀಸಲಾತಿ ಕುರಿತು ಕ್ಯಾಬಿನೆಟ್ ಹಾಗೂ ವಿಧಾನಸಭೆಯಲ್ಲಿ ಅನುಮೋದನೆ ದೊರೆತಿದ್ದು, ರಾಜ್ಯಪಾಲರ ಅಂಕಿತವೂ ಸಿಕ್ಕಿದೆ. ಈ ಹಿನ್ನೆಲೆ ಜಾರಿಯಲ್ಲಿ ವಿಳಂಬವಾಗಬಾರದು ಎಂದು ಅವರು ಸೂಚಿಸಿದರು.
ಇತ್ತೀಚಿನ ದಿನಗಳಲ್ಲಿ ಹುಬ್ಬಳ್ಳಿ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಬಳ್ಳಾರಿ ಹಾಗೂ ರಾಯಚೂರು ಸೇರಿದಂತೆ ವಿವಿಧ ಕಡೆ ನೇಮಕಾತಿ ಸಂಬಂಧ ಹೋರಾಟಗಳು ನಡೆಯುತ್ತಿರುವುದನ್ನು ಉಲ್ಲೇಖಿಸಿದ ಅವರು, ಸರ್ಕಾರ ನ್ಯಾಯಾಲಯದಲ್ಲಿ ಸಮರ್ಪಕ ವಾದ ಮಂಡಿಸಿ ಒಳ ಮೀಸಲಾತಿ ಜಾರಿಗೊಳಿಸಲು ಮುಂದಾಗಬೇಕು ಎಂದು ಮನವಿ ಮಾಡಿದ್ದಾರೆ.
ಅತೀ ಹಿಂದುಳಿದ ಸಮುದಾಯಗಳ ವಿಶ್ವಾಸವನ್ನು ಉಳಿಸಿಕೊಳ್ಳುವುದು ಅಗತ್ಯವಾಗಿದ್ದು, ಒಳ ಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ಪಕ್ಷದ ಎಲ್ಲಾ ನಾಯಕರು ಒಗ್ಗಟ್ಟಿನಿಂದ ನಡೆದುಕೊಳ್ಳಬೇಕೆಂದು ಅವರು ತಿಳಿಸಿದ್ದಾರೆ.


