ಬಳ್ಳಾರಿ, ಸೆ.೧೦: ಬಳ್ಳಾರಿಯ ಕೊಟ್ಟೂರುಸ್ವಾಮಿ ಸಂಸ್ಥಾನ ಮಠದಲ್ಲಿ ಹಾನಗಲ್ಲ ಕುಮಾರ ಮಹಾಶಿವಯೋಗಿಗಳ ೧೫೮ನೆಯ ಹಾಗೂ ಜಗದ್ಗುರು ಡಾ. ಸಂಗನಬಸವ ಮಹಾಸ್ವಾಮಿಗಳವರ ೮೭ನೇ ಜಯಂತ್ಯೋತ್ಸವು ಸೆಪ್ಟಂಬರ್ ೧೩ ಮತ್ತು ೧೪ ರಂದು ನಡೆಯಲಿವೆ ಎಂದು ಶ್ರೀಮಠದ ವ್ಯವಸ್ಥಾಪಕ ದೇವೇಂದ್ರಗೌಡ ತಿಳಿಸಿದ್ದಾರೆ.
ಶ್ರೀಮಠವು ನೀಡಿರುವ ಪತ್ರಿಕಾ ಪ್ರಕಟಣೆಯಲ್ಲಿ, ಸೆಪ್ಟಂಬರ್ ೧೩ರ ಶನಿವಾರ ಸಂಜೆ ೪ ಗಂಟೆಗೆ ಸೋಮಸಮುದ್ರ ಗ್ರಾಮದಲ್ಲಿ ಪ್ರಾರಂಭವಾಗುವ ಪಾದಯಾತ್ರೆಯು ಶ್ರೀಧರಗಡ್ಡೆ ಗ್ರಾಮವನ್ನು ತಲುಪಿ, ಶ್ರೀಕನಕ ದುರ್ಗಮ್ಮ ಗುಡಿಯ ಮೂಲಕ ಬ್ರೂಸ್‌ಪೇಟೆ ಪೊಲೀಸ್ ಠಾಣೆಯ ಮೂಲಕ ಶ್ರೀಮಠದಲ್ಲಿ ಸಮಾರೋಪಗೊಳ್ಳಲಿದೆ. ಅಲ್ಲದೇ, ಸಂಜೆ ೭ ಗಂಟೆಗೆ ಕೊಟ್ಟೂರೇಶ್ವರರ ರಥೋತ್ಸವವು ನೆರವೇರಿಸಲಾಗುತ್ತದೆ.
ಸಂಜೆ ೭ ಗಂಟೆಗೆ ಹಾನಗಲ್ಲ ಕುಮಾರ ಮಹಾಶಿವಯೋಗಿಗಳ `ಜೀವನ ದರ್ಶನ’ ಪ್ರವಚನ ಮಂಗಲೋತ್ಸವ. ಬಾಗಲಕೋಟೆಯ ಗೌ.ಮ. ಉಮಾಪತಿ ಶಾಸ್ತಿçಗಳು ರಚಿಸಿರುವ `ಹಂಪೆ ಹೇಮಕೂಟ ಸಿಂಹಾಸನಾಧೀಶ್ವರ ಶ್ರೀ ಜಗದ್ಗುರು ಕೊಟ್ಟೂರಸ್ವಾಮಿ ಗುರುಪರಂಪರೆ’ ಗ್ರಂಥ ಲೋಕಾರ್ಪಣೆ ನಡೆಯಲಿದೆ.
ಸೆಪ್ಟಂಬರ್ ೧೪ರ ಭಾನುವಾರ ಬೆಳಗ್ಗೆ ೧೦ ಗಂಟೆಗೆ ೧೧೧೧ ಮುತ್ತೆöÊದೆಯರಿಗೆ ಉಡಿ ತುಂಬುವಿಕೆ ಹಾಗೂ ಪೂಜ್ಯದ್ವಯರ ಭಾವಚಿತ್ರದ ಮಹೋತ್ಸವ ನೆರವೇರಲಿದೆ. ಎರೆಡು ದಿನಗಳ ಕಾರ್ಯಕ್ರಮಗಳಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು, ಗಣ್ಯರು ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗಳನ್ನು ಮಾಡಿರುವವರು ಪಾಲ್ಗೊಳ್ಳಲಿದ್ದಾರೆ ಎಂದು ಶ್ರೀಮಠ ತಿಳಿಸಿದೆ.
ಎರೆಡು ದಿನಗಳ ಕಾರ್ಯಕ್ರಮಗಳಲ್ಲಿ ಬಳ್ಳಾರಿ, ಶ್ರೀಧರಗಡ್ಡೆ, ಶಿರಿವಾರ, ಸೊಮಸಮುದ್ರ, ಮದಿರೆ, ಕುರುಗೋಡು, ದರೂರು, ಸಿರಿಗೇರಿ ಹಾಗೂ ಸುತ್ತಲಿನ ವಿವಿಧ ಗ್ರಾಮಗಳ ಗುರು – ಹಿರಿಯರು, ಭಕ್ತಾಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.