ನವದೆಹಲಿ, ಜೂನ್ 26: ಕುತಂತ್ರ ಹಾಗೂ ಷಡ್ಯಂತ್ರ ಮಾಡಿದರೆ ನಾಯಕರಾಗಿ ಹೊರ ಹೊಮ್ಮಲ್ಲ. ಸಮುದಾಯದ ಜನರು ಇದನ್ನು ಒಪ್ಪುವುದಿಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿವೈ ವಿಜಯೇಂದ್ರ ಕಾಂಗ್ರೆಸ್ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು. ಕೆಂಪೇಗೌಡ ಜಯಂತಿ ಆಹ್ವಾನ ಪತ್ರಿಕೆಯಿಂದ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ ಹಾಗೂ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಹೆಸರು ಕೈಬಿಡುವ ವಿಚಾರವಾಗಿ ದೆಹಲಿಯಲ್ಲಿ ಪ್ರತಿಕ್ರಿಯಿಸಿದ ಅವರು, ಲೋಕಸಭೆ ಚುನಾವಣೆಯಲ್ಲಿ ಯಶಸ್ವಿಯಾಗಿದ್ದೇವೆ. ಕಾಂಗ್ರೆಸ್ ಬಗ್ಗೆ ನಮಗೆ ಅನುಕಂಪ ಇಲ್ಲ. ಆದರೆ ರಾಜ್ಯದ ಜನರ ಬಗ್ಗೆ ಅನುಕಂಪ ಇದೆ ಎಂದರು.
ಕಾಂಗ್ರೆಸ್ನಲ್ಲಿ ಹೆಚ್ಚುವರಿ ಡಿಸಿಎಂ ಸ್ಥಾನಕ್ಕೆ ಬೇಡಿಕೆ ಸೃಷ್ಟಿಯಾಗಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಡಿಕೆ ಶಿವಕುಮಾರ್ ಸೊಕ್ಕು ಮುರಿಯಬೇಕು ಎಂಬ ಪ್ರಯತ್ನ ನಡೆಯುತ್ತಿದೆ. ಅವರನ್ನು ಕಟ್ಟಿಹಾಕುವ ಪ್ರಯತ್ನ ಮಾಡಲಾಗುತ್ತಿದೆ. ಅವರ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ. ಹಾಗಾಗಿ ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿಗೆ ಒತ್ತಡ ಹಾಕುತ್ತಿದ್ದಾರೆ. ನನಗೆ ಭರವಸೆಯಿದೆ, ಈ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯಶಸ್ವಿಯಾಗುತ್ತಾರೆ. ಹೈಕಮಾಂಡ್ ಮನವೊಲಿಸಿ ಡಿಸಿಎಂ ಹುದ್ದೆ ಸೃಷ್ಟಿ ಮಾಡುತ್ತಾರೆ ಎಂದರು.