ದೆಹಲಿ, ಅಕ್ಟೋಬರ್ 23: ದೆಹಲಿಯ ರೋಹಿಣಿಯಲ್ಲಿ ಬೆಳಗಿನ ಜಾವ ಪೊಲೀಸ್ ಎನ್ಕೌಂಟರ್ನಡೆದಿದೆ. ಸಿಗ್ಮಾ ಗ್ಯಾಂಗ್ನ ನಾಲ್ವರು ಮೋಸ್ಟ್ ವಾಂಟೆಡ್ ಗ್ಯಾಂಗ್ಸ್ಟರ್ಗಳನ್ನು ಹತ್ಯೆ ಮಾಡಲಾಗಿದೆ. ದೆಹಲಿ ಮತ್ತು ಬಿಹಾರ ಪೊಲೀಸರ ತಂಡಗಳು ಮತ್ತು ಗ್ಯಾಂಗ್ಸ್ಟರ್ಗಳ ನಡುವೆ ವಾಯುವ್ಯ ದೆಹಲಿಯಲ್ಲಿ ಬೆಳಗಿನ ಜಾವ 2.20 ಕ್ಕೆ ಗುಂಡಿನ ಚಕಮಕಿ ನಡೆಯಿತು
ದೆಹಲಿ ಪೊಲೀಸ್ ಮೂಲಗಳ ಪ್ರಕಾರ, ಪೊಲೀಸರು ಗ್ಯಾಂಗ್ ಸದಸ್ಯರನ್ನು ತಡೆಯಲು ಪ್ರಯತ್ನಿಸಿದಾಗ ಎನ್ಕೌಂಟರ್ ನಡೆಯಿತು. ಗ್ಯಾಂಗ್ಸ್ಟರ್ಗಳು ಪೊಲೀಸರ ಮೇಲೆ ಗುಂಡು ಹಾರಿಸಿದಾಗ ಅವರು ಕೂಡ ಪ್ರತೀಕಾರದ ದಾಳಿ ನಡೆಸಿದರು. ನಾಲ್ವರು ಆರೋಪಿಗಳಿಗೂ ಗುಂಡೇಟಿನ ಗಾಯಗಳಾಗಿದ್ದು, ಅವರನ್ನು ರೋಹಿಣಿಯ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಅಲ್ಲಿ ಎಲ್ಲಾ ನಾಲ್ವರು ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಗ್ಯಾಂಗ್ಸ್ಟರ್ ರಂಜನ್ ಪಾಠಕ್ (25 ವರ್ಷ), ಬಿಮ್ಲೇಶ್ ಮಹ್ತೊ (25 ವರ್ಷ), ಮನೀಶ್ ಪಾಠಕ್ (33 ವರ್ಷ) ಮತ್ತು ಅಮನ್ ಠಾಕೂರ್ (21 ವರ್ಷ) ಎಂದು ಗುರುತಿಸಲಾಗಿದೆ. ರಂಜನ್ ಪಾಠಕ್ ಅವರ ನಾಯಕನಾಗಿದ್ದ. ಸಿಗ್ಮಾ ಗ್ಯಾಂಗ್ ಬಿಹಾರದಾದ್ಯಂತ ಸುಲಿಗೆ ಮತ್ತು ಗುತ್ತಿಗೆ ಹತ್ಯೆಗಳಲ್ಲಿ ಭಾಗಿಯಾಗಿಯಾಗಿದ್ದ.
ಈ ನಾಲ್ವರು ವ್ಯಕ್ತಿಗಳು ಬಿಹಾರದಲ್ಲಿ ಕೊಲೆ, ಸುಲಿಗೆ ಮತ್ತು ಸಂಘಟಿತ ಅಪರಾಧ ಚಟುವಟಿಕೆಗಳು ಸೇರಿದಂತೆ ಹಲವಾರು ಘೋರ ಅಪರಾಧಗಳಲ್ಲಿ ಪೊಲೀಸರಿಗೆ ಬೇಕಾಗಿದ್ದರು ಎಂದು ದೆಹಲಿ ಪೊಲೀಸ್ ಮೂಲಗಳು ದೃಢಪಡಿಸಿವೆ.