ಬೆಂಗಳೂರು, ಡಿ.4: ಪ್ರಾದೇಶಿಕ ಅಸಮತೋಲನೆಯ ನಿವಾರಣೆಯ ಮಾನದಂಡದಲ್ಲಿ ತಲಾದಾಯ ಮತ್ತು ಪ್ರದೇಶದ ಹಸಿರು ವ್ಯಾಪ್ತಿಯನ್ನೂ ಪರಿಗಣಿಸುವ ಅಗತ್ಯವಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಪ್ರತಿಪಾದಿಸಿದ್ದಾರೆ.
ವಿಕಾಸಸೌಧದಲ್ಲಿಂದು ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯ ಅಧ್ಯಕ್ಷರು ಹಾಗೂ ಆರ್ಥಿಕ ತಜ್ಞ ಪ್ರೊ. ಎಂ. ಗೋವಿಂದರಾವ್ ನಿಯೋಗದೊಂದಿಗೆ ಸಮಾಲೋಚಿಸಿದ ಅವರು, ಅರಣ್ಯ ಇರುವ ಪ್ರದೇಶಗಳಲ್ಲಿ ಕೆಂಪು ಪ್ರವರ್ಗದ ಕೈಗಾರಿಕೆಗಳ ಸ್ಥಾಪನೆ ಸಾಧ್ಯವಿಲ್ಲ ಹೀಗಾಗಿ ಪಶ್ಚಿಮಘಟ್ಟ ಪ್ರದೇಶಗಳಿಗೆ ಪ್ರೋತ್ಸಾಹಕ ನೀಡುವ ಅಗತ್ಯವಿದೆ ಎಂದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಹಸಿರು ಹೊದಿಕೆಯ ವ್ಯಾಪ್ತಿ ಅತ್ಯಂತ ಕಡಿಮೆ ಇದೆ. ಇಲ್ಲಿ ವೃಕ್ಷ ಸಂವರ್ಧನೆಗೂ ಪ್ರಾದೇಶಿಕ ಅಸಮತೋಲನ ನಿವಾರಣೆಯಲ್ಲಿ ಆದ್ಯತೆ ನೀಡಬೇಕು ಮತ್ತು ಹೆಚ್ಚಿನ ಹಣ ಒದಗಿಸಬೇಕು ಎಂದು ಸಲಹೆ ನೀಡಿದರು.
ಅಸಮತೋಲನ ನಿವಾರಣೆಗೆ ಹಂಚಿಕೆಯಾಗುವ ಹಣವನ್ನು ಮೂಲಸೌಕರ್ಯ ಅಭಿವೃದ್ಧಿ, ಕೈಗಾರಿಕೆ, ಶಾಲಾ, ಕಾಲೇಜು, ವಿಶ್ವವಿದ್ಯಾಲಯ ಸ್ಥಾಪನೆಗೆ ಮಾತ್ರವೇ ಬಳಕೆ ಮಾಡಬೇಕು. ಇತರ ಯಾವುದೇ ಯೋಜನೆಗಳಿಗೆ ಬಳಕೆಯಾದ ಹಣವನ್ನು ಈ ಬಾಬ್ತಿನಲ್ಲಿ ತೋರಿಸಬಾರದು ಎಂಬ ಸಲಹೆ ನೀಡಿದರು.
ಸಮಿತಿಯ ಅಧ್ಯಕ್ಷ ಗೋವಿಂದರಾವ್, ರಾಜಸ್ತಾನದ ನಂತರ ಅತಿ ಹೆಚ್ಚು ಬರಡು ಭೂಮಿ ಇರುವ ರಾಜ್ಯ ಕರ್ನಾಟಕವಾಗಿದ್ದು, ಈ ಸಲಹೆ ಉಪಯುಕ್ತವಾಗಿದೆ ಎಂದರು.
ಕಲ್ಯಾಣ ಕರ್ನಾಟಕದ ಬಹುಪಾಲು ಜನರು ಕೃಷಿಯನ್ನೇ ಅವಲಂಬಿಸಿದ್ದಾರೆ. ಕೃಷಿಯಿಂದ ಲಾಭಕ್ಕಿಂತ ನಷ್ಟವೇ ಹೆಚ್ಚಾಗುತ್ತಿದ್ದು, ಹಲವರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಈ ಅಂಶವನ್ನೂ ಅಸಮತೋನದ ಸೂಚ್ಯಂಕದಲ್ಲಿ ಪರಿಗಣಿಸಬೇಕು ಎಂದರು.
ಪ್ರೊ. ರಾವ್ ಮಾತನಾಡಿ ರೈತರು ಬೆಳೆ ಪದ್ಧತಿಯ ಬದಲಾವಣೆ ಮಾಡುವ ಅಗತ್ಯವಿದ್ದು, ಇದಕ್ಕೆ ಪ್ರೋತ್ಸಾಹ ನೀಡಬೇಕು ಎಂಬ ಅಭಿಪ್ರಾಯ ಮುಂದಿಟ್ಟರು.
ಸಭೆಯಲ್ಲಿ ಸಮಿತಿಯ ಸದಸ್ಯರುಗಳಾದ ಡಾ. ಸೂರ್ಯನಾರಾಯಣ್, ಡಾ. ವಾಸುದೇವ ಸೇಡಂ, ಎನ್.ಟಿ. ಬಾಗಲಕೋಟಿ, ಡಿ. ಚಂದ್ರಶೇಖರಯ್ಯ ಮತ್ತಿತರರು ಉಪಸ್ಥಿತರಿದ್ದರು.