ಬೆಂಗಳೂರು, ನವೆಂಬರ್ 05: ರಾಜಾರಾಮ್ ಮೋಹನರಾಯ್ ರಸ್ತೆಯಲ್ಲಿರುವ EPFO ಸ್ಟಾಫ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಲ್ಲಿ 70 ಕೋಟಿ ರೂ. ವಂಚನೆ ಆರೋಪ ಪ್ರಕರಣ ಸಂಬಂಧ ಆರೋಪಿಗಳ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ನ್ಯಾಯಾಲಯದಿಂದ ಸರ್ಚ್ ವಾರಂಟ್ ಪಡೆದ ಕಬ್ಬನ್ಪಾರ್ಕ್ ಠಾಣೆ ಪೊಲೀಸರು, ಎ1 ಗೋಪಿನಾಥ್, ಎ2 ಜಗದೀಶ್, ಎ7 ಲಕ್ಷ್ಮೀ, ಎ9 ಲಿಂಗೇಗೌಡ, ಎ10 ರಾಮನುಜ ಮನೆಯಲ್ಲಿ ಶೋಧ ನಡೆಸಿದ್ದಾರೆ. ಬೆಂಗಳೂರಿನ ರಿಚ್ಮಂಡ್ ಸರ್ಕಲ್ ಬಳಿಯ ಕಚೇರಿ, ಆರ್.ಆರ್.ನಗರ, ಜೆ.ಪಿ.ನಗರ, ಅಂಜನಾಪುರದಲ್ಲಿ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ ಚಿನ್ನಾಭರಣ, ನಗದು, ದಾಖಲೆ, ಹೂಡಿಕೆ ಪತ್ರಗಳು ಪತ್ತೆಯಾಗಿವೆ.
ಭವಿಷ್ಯಕ್ಕೆ ಸಹಾಯ ಆಗುತ್ತದೆ ಎಂದು ಉಳಿತಾಯದ ಹಣವನ್ನು ತಾವೇ ಮಾಡಿಕೊಂಡಿದ್ದ EPFO ಸ್ಟಾಫ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿನಲ್ಲಿ ಅನೇಕರು ಹೂಡಿಕೆ ಮಾಡಿದ್ದರು. ಸೊಸೈಟಿಯೂ ಚೆನ್ನಾಗಿಯೇ ನಡೆಯುತ್ತಿತ್ತು. ತಿಂಗಳು, ತಿಂಗಳು ಹಣಕ್ಕೆ ಬಡ್ಡಿಯೂ ಸರಿಯಾಗಿ ಬರುತ್ತಿತ್ತು. ಆದರೆ 3 ತಿಂಗಳಿನಿಂದ ಬಡ್ಡಿ ಬರದೇ ಇದ್ದಾಗ ಅನುಮಾನಗೊಂಡು ಈ ಬಗ್ಗೆ ಪರಿಶೀಲನೆ ನಡೆಸಿದಾಗ, ಸೂಸೈಟಿಯಲ್ಲಿದ್ದ ಒಟ್ಟು 73 ಕೋಟಿ ರೂ. ಹೂಡಿಕೆ ಹಣದ ಪೈಕಿ ಬರೋಬ್ಬರಿ 70 ಕೋಟಿ ವಂಚನೆ ನಡೆದಿರುವುದು ಪತ್ತೆಯಾಗಿತ್ತು. ಕೇವಲ 3 ಕೋಟಿ ರೂ. ಹಣ ಬಿಟ್ಟು, ಉಳಿದ ಹಣ ಖಾತೆಯಲ್ಲಿ ಇಲ್ಲ ಎಂಬ ವಿಚಾರ ಬಯಲಾಗಿತ್ತು. ಸಿಇಓ ಗೋಪಿ ಗೌಡ ಮತ್ತು ಅಕೌಂಟೆಂಟ್ ಜಗದೀಶ್ ಸೇರಿ ಈ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಹೂಡಿಕೆದಾರರು ಆರೋಪಿಸಿದ್ದರು.


