ಮಂಡ್ಯ, ಸೆಪ್ಟೆಂಬರ್ 26: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ KRS ಜಲಾಶಯದ ಬೋಟಿಂಗ್ ಪಾಯಿಂಟ್ನಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಕನಸಿನ ಕಾರ್ಯಕ್ರಮ ‘ಕಾವೇರಿ ಆರತಿ’ಗೆ ಇಂದು ಚಾಲನೆ ಸಿಗಲಿದೆ. 5 ದಿನಗಳ ಕಾಲ ಸಾಂಕೇತಿಕವಾಗಿ ಕಾವೇರಿ ಆರತಿ ಕಾರ್ಯಕ್ರಮ ನಡೆಯಲಿದೆ. ಸಂಜೆ 6 ಗಂಟೆಗೆ ಡಿಸಿಎಂ ಡಿಕೆಶಿ ಕಾವೇರಿ ಆರತಿಗೆ ಚಾಲನೆ ನೀಡಲಿದ್ದು, ಕಾವೇರಿ ನದಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ತರಬೇತಿ ಪಡೆದಿರುವ ಸ್ಥಳೀಯ ಪುರೋಹಿತರಿಂದಲೇ ಕಾರ್ಯಕ್ರಮ ನಡೆಯಲಿದ್ದು, ಗಂಗಾರತಿ ಮಾದರಿಯಲ್ಲಿಯೇ ಕಾವೇರಿ ಆರತಿ ಇರಲಿದೆ. 12-13 ಜನರನ್ನೊಳಗೊಂಡ ವೈದಿಕರ ತಂಡ ಕಾರ್ಯಕ್ರಮದ ನೇತೃತ್ವ ವಹಿಸಲಿದೆ. ಇನ್ನು ರಾಜ್ಯ, ಹೊರರಾಜ್ಯ ಸೇರಿದಂತೆ ಕಾರ್ಯಕ್ರಮಕ್ಕೆ ಸುಮಾರು 8 ಸಾವಿರಕ್ಕೂ ಹೆಚ್ಚು ಜನ ಬರುವ ನಿರೀಕ್ಷೆ ಇದೆ. ಕೆಆರ್‌ಎಸ್ ಬೃಂದಾವನಕ್ಕೆ ಬರುವ ಪ್ರವಾಸಿಗರಿಗೆ ಉಚಿತ ಪ್ರವೇಶ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಜೊತೆಗೆ ಕಾರ್ಯಕ್ರಮದ ಐದೂ ದಿನಗಳ ಕಾಲ ಟೋಲ್ ಸಂಗ್ರಹದಲ್ಲೂ ಪ್ರವಾಸಿಗರಿಗೆ ವಿನಾಯಿತಿ ಇರಲಿದೆ.


