ಗದಗ: ಕರ್ಮಗಳಲ್ಲಿ ಕಾಮ್ಯ ಹಾಗೂ ನಿಷ್ಕಾಮ್ಯ ಕರ್ಮಗಳಿವೆ. ಅಪೇಕ್ಷೆ ಇಟ್ಟುಕೊಂಡು ಮಾಡುವ ಕಾರ್ಯಗಳನ್ನು ಕಾಮ್ಯ ಮಾರ್ಗ ಹಾಗೂ ಅಪೇಕ್ಷೆಯಿಲ್ಲದೇ ಮಾಡುವ ಕಾರ್ಯಗಳನ್ನು ನಿಷ್ಕಾಮ್ಯ ಕರ್ಮಗಳೆಂದು ಕರೆಯಲಾಗುತ್ತದೆ ಎಂದು ಕಾಶೀ ಪೀಠದ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯರು ಹೇಳಿದರು.
ನಗರದ ಎಪಿಎಂಸಿ ಆವರಣದಲ್ಲಿರುವ ಕೆ.ಎಚ್. ಪಾಟೀಲ ಸಭಾಭವನದಲ್ಲಿ ಜಗದ್ಗುರು ಪಂಚಾಚಾರ್ಯ ಸೇವಾ ಸಂಘ, ಜಗದ್ಗುರು ವಿಶ್ವಾರಾಧ್ಯ ಜನಕಲ್ಯಾಣ ಪ್ರತಿಷ್ಠಾನ ಹಾಗೂ ಜಗದ್ಗುರು ವಿಶ್ವಾರಾಧ್ಯ ಎಜ್ಯೂಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ಆಷಾಢ ಮಾಸದ ಅಂಗವಾಗಿ ಮಂಗಳವಾರ ಜರುಗಿದ ‘ಸಿದ್ಧಾಂತ ಶಿಖಾಮಣಿ’ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಜ್ಞಾನದ ಅರಿವು ಇಲ್ಲದ ಅಪೇಕ್ಷೆಯಿಂದ ಮಾಡುವ ಕರ್ಮಗಳಿಂದ ಮೋಕ್ಷ ಸಿಗಲು ಸಾಧ್ಯವಿಲ್ಲ. ಜ್ಞಾನದ ಜೊತೆಗೆ ಗುರುವಿನ ಸಾನ್ನಿಧ್ಯದಲ್ಲಿ ಸಾಗಿದಾಗ ಮೋಕ್ಷದ ಪಥದಲ್ಲಿ ಸದ್ಗತಿಯನ್ನು ಕಾಣಲು ಸಾಧ್ಯ ಎಂದು ಹೇಳಿದರು.
ಮಾನವನು ತನ್ನಲ್ಲಿನ ಅಹಂಕಾರ ಭಾವನೆಯನ್ನು ಕಳೆದುಕೊಳ್ಳಬೇಕು. ಮನೆಯಲ್ಲಿ ಯಜಮಾನಿಕೆ ಜಾಗ ಸಿಗಬೇಕು ಎಂದಾಗ ಅಲ್ಲಿ ತ್ಯಾಗ, ಜ್ಞಾನ, ಅರಿವು ಬೇಕಾಗುತ್ತದೆ ಎಂದು ಹೇಳಿದರು.
ಅನೇಕ ಜನ್ಮಗಳ ಪುಣ್ಯದ ಕರ್ಮಗಳ ಫಲವಾಗಿ ಮನುಷ್ಯ ಜನ್ಮ ದೊರೆಯುತ್ತದೆ. ಆದ್ದರಿಂದ ಮಾನವನಾಗಿ ಹುಟ್ಟಿದ ಮೇಲೆ ಫಲಗಳ ಅಪೇಕ್ಷೆ ಇಲ್ಲದೆ ಕರ್ಮಗಳನ್ನು ಮಾಡಿದಾಗ ಮೋಕ್ಷ ಹೊಂದಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ನರೇಗಲ್ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮನುಷ್ಯ ಜನ್ಮ ಅತ್ಯಂತ ಶ್ರೇಷ್ಠವಾದ ಜನ್ಮವಾಗಿದೆ. ಮನುಷ್ಯ ಜನ್ಮಕ್ಕೆ ಒಂದು ಗುರಿ ಮತ್ತು ಮಾರ್ಗವಿದೆ. ಮಾನವ ಮೋಕ್ಷ, ಮುಕ್ತಿ, ಕೈವಲ್ಯದಂತಹ ಆತ್ಮಸಾಕ್ಷಾತ್ಕಾರಗಳನ್ನು ಅಳವಡಿಸಿಕೊಂಡು ನಡೆದಾಗ ಮಾತ್ರ ಮಾನವ ಜನ್ಮ ಸಾರ್ಥಕವಾಗುತ್ತದೆ ಎಂದು ಹೇಳಿದರು.
ಮಾನವ ಮೋಕ್ಷವನ್ನು ಹೊಂದುವ ಬಯಕೆಯಿರುತ್ತದೆ. ನಮಗೆ ಜೀವನದಲ್ಲಿ ಯಾವ ವಸ್ತುಗಳು ದುಃಖವನ್ನು ತೆಗೆದುಕೊಂಡು ಬರುತ್ತವೆ ಅಂತವುಗಳನ್ನು ಬಿಟ್ಟಾಗ ಮಾತ್ರ ಮೋಕ್ಷ ದೊರೆಯುತ್ತದೆ. ಅಂದಾಗ ಮಾತ್ರ ಸುಖ ಸಿಗುತ್ತದೆ. ಅಲ್ಲದೇ, ಕರ್ಮಮಾರ್ಗ, ಜ್ಞಾನಮಾರ್ಗ, ಭಾವಮಾರ್ಗಗಳಲ್ಲಿ ನಡೆದಾಗ ಸುಖ-ಸಂತೋಷ ಕಾಣಲು ಸಾಧ್ಯ ಎಂದು ವಿವರಿಸಿದರು.
ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಕಲ್ಲಯ್ಯಜ್ಜನವರು ನೇತೃತ್ವ ವಹಿಸಿ ಮಾತನಾಡಿ, ಪ್ರತಿವರ್ಷ ಆಷಾಢ ಮಾಸದಲ್ಲಿ ಕಾಶೀ ಪೀಠದ ಮಹಾಸನ್ನಿಧಿಯವರು ಗದಗ ಜಿಲ್ಲೆಗೆ ಆಗಮಿಸಿ ಭಕ್ತರಿಗೆ ಧರ್ಮದಿಂದ ನಡೆದು ಮಾನವರಾಗಿ ನಡೆಯುವ ಸಲುವಾಗಿ ಆಧ್ಯಾತ್ಮಿಕ ಪ್ರವಚನ ನೀಡುತ್ತಿರುವುದು ನಮ್ಮೆಲ್ಲರ ಭಾಗ್ಯ ಎಂದು ಹೇಳಿದರು.
ಸಂಘದ ಅಧ್ಯಕ್ಷ ಮಂಜುನಾಥ ಬೇಲೇರಿ, ಕಾರ್ಯಾಧ್ಯಕ್ಷ ಸಿದ್ದಲಿಂಗಪ್ಪ ಚಳಗೇರಿ, ಉಮಾಪತಿ ಭೂಸನೂರಮಠ, ಮಲ್ಲಿಕಾರ್ಜುನಯ್ಯ ಹಿರೇಮಠ ಸೇರಿ ಹಲವರು ಇದ್ದರು. ಮಹೇಶ ಕುಂದ್ರಾಳಹಿರೇಮಠ ಪ್ರಾರ್ಥಿಸಿದರು. ಶಿವಾನಂದಯ್ಯ ಹಿರೇಮಠ ಸ್ವಾಗತಿಸಿದರು. ಜಗದ್ಗುರು ಪಂಚಾಚಾರ್ಯ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ವಿ.ಕೆ. ಗುರುಮಠ ನಿರೂಪಿಸಿದರು.