ಧರ್ಮಗ್ರಂಥಗಳ ಪಾರಾಯಣ ಅಗತ್ಯ: ಕಾಶೀ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯರು

Ravi Talawar
ಧರ್ಮಗ್ರಂಥಗಳ ಪಾರಾಯಣ ಅಗತ್ಯ: ಕಾಶೀ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯರು
WhatsApp Group Join Now
Telegram Group Join Now
ಗದಗ: ಇಷ್ಟಲಿಂಗ ಪೂಜೆಯನ್ನು ಬಹಿರಂಗವಾಗಿ ವೈಭವಯುತವಾಗಿ ಆಚರಿಸಿಕೊಂಡು ಬರುವಲ್ಲಿ ರಂಭಾಪುರಿ ಪೀಠದ ವೀರಗಂದಾಧರ ಜಗದ್ಗುರುಗಳು ಪ್ರಮುಖ ಕಾರಣೀಕರ್ತರು ಎಂದು ಕಾಶೀ ಪೀಠದ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯರು ಹೇಳಿದರು.
ನಗರದ ಎಪಿಎಂಸಿ ಆವರಣದಲ್ಲಿರುವ ಕೆ.ಎಚ್. ಪಾಟೀಲ ಸಭಾಭವನದಲ್ಲಿ ಜಗದ್ಗುರು ಪಂಚಾಚಾರ್ಯ ಸೇವಾ ಸಂಘ, ಜಗದ್ಗುರು ವಿಶ್ವಾರಾಧ್ಯ ಜನಕಲ್ಯಾಣ ಪ್ರತಿಷ್ಠಾನ ಹಾಗೂ ಜಗದ್ಗುರು ವಿಶ್ವಾರಾಧ್ಯ ಎಜ್ಯೂಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ಆಷಾಢ ಮಾಸದ ಅಂಗವಾಗಿ ಗುರುವಾರ ಜರುಗಿದ ಮಹಿಳೆಯರಿಗೆ ಉಡಿ ತುಂಬುವ ಹಾಗೂ ‘ಸಿದ್ಧಾಂತ ಶಿಖಾಮಣಿ’ ಆಧ್ಯಾತ್ಮಿಕ ಪ್ರವಚನ ಮಂಗಲೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ರಂಭಾಪುರಿ ಪೀಠದ ವೀರಗಂಗಾಧರ ಜಗದ್ಗುರುಗಳ ತರುವಾಯ ಕಾಶೀ ಪೀಠದ ನೂತನ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯರು ನೆರವೇರಿಸಿಕೊಂಡು ಬಂದಿದ್ದಾರೆ ಎಂದರು.
ಸರ್ವಾರಾಧ್ಯನಾಗಿರುವ ಶಿವನನ್ನು ದೇಹದ ಮೇಲಿರಿಸಿಕೊಂಡು, ಲಿಂಗದೊಂದಿಗೆ ಬದುಕಿ, ಲಿಂಗದಲ್ಲಿ ಲೀನವಾಗುವ ಭಾಗ್ಯ ಮನುಷ್ಯನಿಗೆ ಮಾತ್ರ ಲಭಿಸಿದೆ. ಪ್ರತಿಯೊಬ್ಬರೂ ಪೂಜೆ ಮಾಡುವಾಗ ಎಷ್ಟು ಭಾವದೊಳಗೆ ಬೆರೆಯುತ್ತೇವೆ ಅಷ್ಟು ಪುಣ್ಯ ಸಿಗುತ್ತದೆ ಎಂದರು.
ನಮ್ಮ ದೇಹದೊಳಗಿನ ಜೀವಕೋಶಗಳು ಎಲ್ಲಿಯವರೆಗೆ ಸಶಕ್ತವಾಗಿರುತ್ತವೆ ನಮ್ಮಲ್ಲಿ ರೋಗನಿರೋಧಕ ಶಕ್ತಿ ಇರುತ್ತದೆ. ಜೀವಕೋಶಗಳು ಸಶಕ್ತವಾಗಿರಲು ನಮ್ಮ ಮನಸ್ಸಿನ ಸ್ಥಿತಿ ಪ್ರಮುಖವಾಗಿರುತ್ತವೆ. ನಾವು ನಿತ್ಯ ಭಕ್ತಿಯಿಂದ ತನ್ಮಯತೆಯಿಂದ ಪೂಜೆ ಮಾಡಬೇಕು. ಧರ್ಮಗ್ರಂಥಗಳನ್ನು ಪಾರಾಯಣ ಮಾಡುವಂತಹ ಸಮಯ ರೂಢಿಸಿಕೊಂಡರೆ ಜೀವಕೋಶಗಳು ಸಶಕ್ತಗೊಂಡು ನಿರೋಗಿಗಳಾಗಿ ಆರೋಗ್ಯಂತರಾಗಿರುತ್ತವೆ ಎಂದು ಹೇಳಿದರು.
ಕಾಶೀ ಪೀಠ ಗದಗ ಮಹಾನಗರಕ್ಕೆ 25 ವರ್ಷಗಳ ಹಿಂದೆ ಆಗಮಿಸಿದಾಗ 21ದಿನಗಳ ಕಾಲ ಆಷಾಢ ಮಾಸದಲ್ಲಿ ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಪ್ರವಚನ ಹಾಗೂ ಗುರುಪೂರ್ಣಿಮೆ ಕಾರ್ಯಕ್ರಮ ಮಾಡಿದ್ದೇವು. ಪ್ರಸಕ್ತ ವರ್ಷ ನೂತನ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯರು ನಡೆಸಿದ್ದಾರೆ ಎಂದು ಹೇಳಿದರು
ಕಾಶೀ ಪೀಠದ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯರು ಮಾತನಾಡಿ, ಅನೇಕ ಜನ್ಮಗಳ ಪುಣ್ಯದ ಫಲವಾಗಿ ಮಾನವ ಜನ್ಮ ಸಿಕ್ಕಿದೆ. ಗುರುವಿನ ಸಾನ್ನಿಧ್ಯದಲ್ಲಿ ದೇಹವನ್ನು ದಂಡಿಸುವ ಮೂಲಕ ನಮ್ಮ ಪೂರ್ಣಾಂಗಗಳು ಶರಣಾಗತಿ ಹೊಂದಿದಾಗ ಗುರುವಿನ ಕೃಪಾಕಟಾಕ್ಷ ಒಲಿಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
WhatsApp Group Join Now
Telegram Group Join Now
Share This Article