ಬೆಳಗಾವಿ: ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಅವರು 7ನೇ ಬಾರಿ ಮಂಡಿಸಿದ ಕೇಂದ್ರ ಬಜೆಟ್ ನಲ್ಲಿ ಕರ್ನಾಟಕವನ್ನು ನಿರ್ಲಕ್ಷಿಸಲಾಗಿದೆ ಎಂದು ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಬಜೆಟ್ ಕುರಿತು ತಮ್ಮ ಅಭಿಪ್ರಾಯವನ್ನು ಪ್ರಕಟಣೆಯಲ್ಲಿ ತಿಳಿಸಿದ ಸಂಸದೆ ಪ್ರಿಯಂಕಾ ಜಾರಕಿಹೊಳಿ, ಹೈದರಾಬಾದ್-ಕರ್ನಾಟಕ ಕಾರಿಡಾರ್ ಯೋಜನೆ ಬಿಟ್ಟರೆ, ಕರ್ನಾಟಕಕ್ಕೆ ಬಹುಬೇಡಿಕೆಯ ರೈಲ್ವೆ ಯೋಜನೆಯಾಗಲಿ, ನೀರಾವರಿ ಯೋಜನೆಗಳಾಗಲಿ ಘೋಷಣೆ ಮಾಡಿಲ್ಲ ಎಂದು ಟೀಕಿಸಿದ್ದಾರೆ.
ಕೇಂದ್ರ ಸರ್ಕಾರದ ಬಜೆಟ್ ಇಡೀ ದೇಶಕ್ಕೆ ಅನ್ವಯ ಆಗುವುದರಿಂದ ರಾಜ್ಯಕ್ಕೆ ಎಷ್ಟು ಸಿಗುತ್ತದೆ ಎಂಬುವುದನ್ನು ಊಹಿಸಲು ಸಾಧ್ಯವಿಲ್ಲ. ಬಿಜೆಪಿಗೆ ಸರ್ಕಾರ ರಚನೆಗೆ ಸಹಕರಿಸಿದ ಜೆಡಿಯು ಆಡಳಿತದ ಬಿಹಾರ, ತೆಲುಗುದೇಶಂ ಆಡಳಿತದ ಆಂಧ್ರಪ್ರದೇಶಕ್ಕೆ ಬಂಪರ್ ಕೊಡುಗೆ ನೀಡಲಾಗಿದೆ. ಬಿಹಾರಕ್ಕೆ 26 ಸಾವಿರ ಕೋಟಿ ರೂ., ಆಂಧ್ರಪ್ರದೇಶಕ್ಕೆ 15 ಸಾವಿರ ಕೋಟಿ ರೂ. ಆರ್ಥಿಕ ಪ್ಯಾಕೇಜ್ ನೀಡಲಾಗಿದೆ. ಆದರೆ ಕರ್ನಾಟಕಕ್ಕೆ ಯಾವುದೇ ಪ್ರಮುಖ ಯೋಜನೆಗಳಾಗಲಿ ಅಥವಾ ವಿಶೇಷ ಪ್ಯಾಕೇಜ್ ನೀಡಿಲ್ಲವೆಂದು ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರು ತಿಳಿಸಿದ್ದಾರೆ.