ನಟ ದರ್ಶನ್ ಅವರು ಕೊಲೆ ಕೇಸ್ನಲ್ಲಿ ಜೈಲು ಸೇರಿದ್ದಾರೆ. ಆಪ್ತೆ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಸಂದೇಶ ಕಳುಹಿಸಿದ ರೇಣುಕಾ ಸ್ವಾಮಿಯನ್ನು ಇವರು ಹತ್ಯೆ ಮಾಡಿದ ಆರೋಪ ಹೊತ್ತಿದ್ದಾರೆ. ಈ ಪ್ರಕರಣದಿಂದ ದರ್ಶನ್ ಅವರನ್ನು ಸಿನಿಮಾ ರಂಗದಿಂದ ಬ್ಯಾನ್ ಮಾಡಬೇಕು ಎನ್ನುವ ಮಾತುಗಳು ಜೋರಾಗಿವೆ. ಈ ಬೆನ್ನಲ್ಲೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಭೆ ಕರೆದಿದೆ. ಈ ವೇಳೆ ದರ್ಶನ್ ಭವಿಷ್ಯ ನಿರ್ಧಾರ ಆಗೋ ಸಾಧ್ಯತೆ ಇದೆ.
ಇಂದು (ಜೂನ್ 13) ಸಂಜೆ ನಾಲ್ಕು ಗಂಟೆಗೆ ಕಾರ್ಯಕಾರಿ ಸಮತಿ ಸಭೆ ಕರೆಯಲಾಗಿದೆ. ಆ ಸಭೆಯಲ್ಲಿ ದರ್ಶನ್ ವಿಚಾರ ಪ್ರಮುಖವಾಗಿ ಚರ್ಚೆ ಆಗಲಿದೆ. ಈ ಸಭೆಯಲ್ಲಿ ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎನ್ನುವ ಚರ್ಚೆ ಶುರುವಾಗಿದೆ.
ಈ ಬಗ್ಗೆ ನಿರ್ಮಾಪಕ ಸಂಘದ ಅಧ್ಯಕ್ಷ ಉಮೇಶ್ ಬಣಕರ್ ಮಾತನಾಡಿದ್ದಾರೆ. ‘ಆ ಸಭೆಯಲ್ಲಿ ಎನು ನಿರ್ಧಾರವಾಗುತ್ತೋ ಅದಕ್ಕೆ ನಾವೆಲ್ಲ ಬದ್ಧರಾಗಿರ್ತಿವಿ. ಎಲ್ಲರೂ ಒಂದು ನಿರ್ಧಾರಕ್ಕೆ ಬರುತ್ತಾರೆ. ಕೇಸ್ ಕಾನೂನಿನ ಅಂಗಳದಲ್ಲಿ ಇರುವುದರಿಂದ ನಾವು ಮಧ್ಯೆ ಹೋಗೋಕೆ ಆಗಲ್ಲ. ಬ್ಯಾನ್ ಮಾಡೋದು ಕಷ್ಟ, ಚಿತ್ರರಂಗ ಅವರಿಗೆ ಅಸಹಕಾರ ವ್ಯಕ್ತಪಡಿಸಬಹುದು ಅಷ್ಟೇ. ಬ್ಯಾನ್ ಅನ್ನೋ ಪದ ಪ್ರಜಾಪ್ರಭುತ್ವದಲ್ಲಿ ಇಲ್ಲ’ ಎಂದಿದ್ದಾರೆ ಅವರು.
‘ಮುಂಚೇ ಕೆಲವರನ್ನು ಬ್ಯಾನ್ ಮಾಡಿ ಆ ಬಳಿಕ ಹಿಂದೆ ತೆಗೆದುಕೊಂಡಿದ್ದೇವೆ. ಈ ಬಗ್ಗೆ ನ್ಯಾಯಲಯ ಕ್ರಮ ತೆಗೆದುಕೊಳ್ಳುತ್ತದೆ. ಅಸಹಾಕಾರ ತೋರುವುದರಿಂದ ಅವರ ಸಿನಿಮಾಗಳನ್ನು ಯಾರೂ ನಿರ್ದೆಶನ ಮಾಡಲ್ಲ, ಯಾರು ನಿರ್ಮಾಣ ಮಾಡಲ್ಲ. ಕಾರ್ಮಿಕ ವರ್ಗ ಸಾಥ್ ಕೊಡುವುದಿಲ್ಲ’ ಎಂದು ಉಮೇಶ್ ಬಣಕರ್ ಹೇಳಿದ್ದಾರೆ.