ಕೋಲಾರ, ಏಪ್ರಿಲ್ 18: ರಾಜ್ಯದಲ್ಲಿ ಲೋಕಸಭಾ ಚುನಾವಣಾ ಕಣ ರಂಗೇರಿದೆ. ರಾಜ್ಯದ 28 ಕ್ಷೇತ್ರಗಳಲ್ಲೂ ಪ್ರಚಾರ ಭರ್ಜರಿಯಾಗಿ ನಡೀತಿದ್ರೆ, ಸಿಎಂ ತವರು ಕ್ಷೇತ್ರದಲ್ಲಿ ಮಾತ್ರ ಪ್ರಚಾರ ಮತ್ತೊಂದು ಹಂತಕ್ಕೆ ತಲುಪಿದೆ. ಮೈಸೂರು-ಚಾಮರಾಜನಗರದಲ್ಲಿ ಸ್ವತಃ ಸಿಎಂ ಸಿದ್ದರಾಮಯ್ಯ 9 ದಿನ ಪ್ರಚಾರ ಮಾಡಿದ್ದಾರೆ.
ಇದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ. ಈ ಬಾರಿ ಈ ಎರಡೂ ಕ್ಷೇತ್ರಗಳನ್ನು ಗೆಲ್ಲಲೇಬೇಕು. ಇಲ್ಲವಾದಲ್ಲಿ ಸಿಎಂ ಕುರ್ಚಿ ಕಂಟಕ ಇದೆ ಎನ್ನುವ ಮಾತುಗಳು ಹರಿದಾಡುತ್ತಿವೆ. ಇದರ ಮಧ್ಯೆ ಇದೀಗ ಸಿದ್ದರಾಮಯ್ಯನವರ ಶಿಷ್ಯ, ಸಚಿವ ಬೈರತಿ ಸುರೇಶ್ ಸಹ ಕಾಂಗ್ರೆಸ್ ಅಭ್ಯರ್ಥಿಗಳು ಸೋತರೆ ಸಿಎಂ ಸ್ಥಾನಕ್ಕೆ ಕಂಟಕವಾಗಲಿದೆ ಎಂದು ಅಚ್ಚರಿ ಹೇಳಿಕೆ ನೀಡಿದ್ದಾರೆ. ಇದು ರಾಜ್ಯ ಕಾಂಗ್ರೆಸ್ನಲ್ಲಿ ಬಾರೀ ಸಂಚಲನಕ್ಕೆ ಕಾರಣವಾಗಿದೆ.
ಇಂದು (ಏಪ್ರಿಲ್ 18) ಕೋಲಾರ ನಗರದ ಹಾಲಿಸ್ಟರ್ ಭವನದಲ್ಲಿ ನಡೆದ ಕುರುಬ ಸಮುದಾಯದ ಮುಖಂಡ ಸಭೆಯಲ್ಲಿ ಮಾತನಾಡಿದ ಸಚಿವ ಬೈರತಿ ಸುರೇಶ್, ಕಾಂಗ್ರೆಸ್ ಅಭ್ಯರ್ಥಿಗಳು ಸೋತರೆ ಸಿದ್ದರಾಮಯ್ಯ ಸ್ಥಾನಕ್ಕೆ ಕಂಟಕವಾಗಲಿದೆ. ಹೀಗಾಗಿ ಕುರುಬ ಸಮುದಾಯ ಸಿದ್ದರಾಮಯ್ಯನವರ ಕೈ ಬಲಪಡಿಸಬೇಕು. ನಿಮ್ಮ ಬೆಂಬಲ ಕಾಂಗ್ರೆಸ್ ಪಕ್ಷದ ಮೇಲಿರಲಿ, ಸಿದ್ದರಾಮಯ್ಯನವರ ಮೇಲಿರಲಿ, ಹಾಗೇ ಅಭ್ಯರ್ಥಿ ಗೌತಮ್ ಮೇಲಿರಲಿ. ಒಂದು ವೇಳೆ ನೀವು ಬೇರೆ ಮನಸ್ಸು ಮಾಡಿ ಬೇರೆ ಅಭ್ಯರ್ಥಿ ಏನಾದರೂ ಗೆದ್ದರೆ ಸಿದ್ದರಾಮಯ್ಯನವರ ಸೀಟಿಗೆ ಕಂಟಕವಾಗಲಿದೆ ಎಂದು ಹೇಳಿದರು.