ಬೆಂಗಳೂರು, ಫೆಬ್ರವರಿ 27: ಪ್ರತಿಷ್ಠಿತ ಅಂತರರಾಷ್ಟ್ರೀಯ ಬೂಕರ್ ಅವಾರ್ಡ್ಗೆ ಕರುನಾಡಿನ ಹೆಮ್ಮೆಯ ಲೇಖಕಿ ಹಾಸನದ ಬಾನು ಮುಷ್ತಾಕ್ ಅವರ ಕೃತಿಯೊಂದು ಅಂತಿಮ 13ರ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಇದು ಕನ್ನಡ ಸಾರಸ್ವತ ಲೋಕದಲ್ಲಿ ದೊಡ್ಡ ಸಂಭ್ರಮಕ್ಕೆ ಸಾಕ್ಷಿಯಾಗಿದೆ, ಕನ್ನಡದ ಲೇಖಕಿಯೊಬ್ಬರ ಅನುವಾದಿತ ಕೃತಿಯೊಂದು ಬೂಕರ್ ಪ್ರಶಸ್ತಿಯ ಇತಿಹಾಸದಲ್ಲೇ ಮೊದಲ ಬಾರಿಗೆ 13 ಕೃತಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.
ಇಂಗ್ಲೆಂಡ್ನಲ್ಲಿ ಕೊಡಮಾಡುವ ಈ ಪ್ರತಿಷ್ಠಿತ ಬೂಕರ್ ಪ್ರಶಸ್ತಿಗೆ ಆರಂಭದಲ್ಲಿ 154 ಕೃತಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿತ್ತು. ತೀರ್ಪುಗಾರರು ಪರಾಮರ್ಶೆ, ಅಧ್ಯಯನದ ಬಳಿಕ ಅಂತಿಮವಾಗಿ 13 ಕೃತಿಗಳನ್ನು ಲಾಂಗ್ ಲಿಸ್ಟ್ ಮಾಡುತ್ತಾರೆ. ಅದರಲ್ಲಿ ಈ ಬಾರಿ ‘ಹಾರ್ಟ್ ಲ್ಯಾಂಪ್’ ಕೃತಿ ಕೂಡ ಸ್ಥಾನ ಪಡೆದಿದೆ.