ಬಳ್ಳಾರಿ:ಮಾ,20..; ದತ್ತಿ ಉಪನ್ಯಾಸಗಳು ಕನ್ನಡ ಸಾಹಿತ್ಯದ ಶ್ರೀಮಂತಿಕೆಯನ್ನು ಪರಿಚಯಿಸುವುದರೊಂದಿಗೆ ಹೊಸ ವಿಚಾರಗಳನ್ನು ತಿಳಿಸಿ ಕನ್ನಡತನವನ್ನು ಬೆಳೆಸುವ ಕಾರ್ಯ ಮಾಡುತ್ತದೆ ಎಂದು ಕರ್ನಾಟಕ ಪತ್ರಕರ್ತರ ಸಂಘದ ಬಳ್ಳಾರಿ ಜಿಲ್ಲಾಧ್ಯಕ್ಷ ಯಾಳ್ಪಿ ವಲಿಭಾಷ ಅಭಿಪ್ರಾಯಪಟ್ಟರು.
ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಬಳ್ಳಾರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಬಳ್ಳಾರಿರವರ ಸಂಯುಕ್ತಾಶ್ರಯದಲ್ಲಿ ಇಂದು ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಪ್ರೋ.ಕೆ.ಬಿ.ಹನುಮಂತರಾಯ, ಲಿಂ.ಟಿ.ಸಾವಿತ್ರಮ್ಮ ಸ್ಮಾರಕ, ಲಿಂ.ಕೆ.ಲಿಂಗನಗೌಡ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ಭಾಷೆ ಇಂದು ಜಾತಿ, ಧರ್ಮ ಹಾಗೂ ಗಡಿಯನ್ನು ಮೀರಿ ಬೆಳೆದಿದೆ. ಇದಕ್ಕೆ ಒಂದು ಮುಖ್ಯ ಕಾರಣವೆಂದರೆ ಕನ್ನಡ ಸಾಹಿತ್ಯ ಪರಿಷತ್ತು. ತನ್ಮೂಲಕ ಕನ್ನಡ ನಾಡು, ನುಡಿ, ಸಂಸ್ಕೃತಿ, ಕಲೆ, ಸಾಹಿತ್ಯವನ್ನು ನಿರಂತರವಾಗಿ ಪೋಷಿಸುತ್ತ ವಿವಿಧ ಕಾರ್ಯಕ್ರಮ ಮೂಲಕ ಮುಂದಿನ ತಲೆಮಾರಿಗೆ ಕನ್ನಡದ ಶ್ರೇಷ್ಠತೆಯನ್ನು ಪರಿಚಿಸುವ ಕೆಲಸವನ್ನು ಮಾಡುತ್ತಿದೆ. ಕನ್ನಡ ಸಾಹಿತ್ಯ ಸಮ್ಮೇಳನಗಳು, ಕವಿಗೋಷ್ಠಿ ಇನ್ನಿತರ ಕಾರ್ಯಕ್ರಮಗಳು ನಡೆದು ಕನ್ನಡ ಭಾಷೆ ಇನ್ನೂ ಬೆಳವಣಿಗೆ ಕಾಣುವುದರೊಂದಿಗೆ ಕನ್ನಡ ಭಾಷೆ ತನ್ನ ಅಸ್ಮಿತೆಯನ್ನು ಕನ್ನಡಿಗರಿಗೆ ತೋರಿಸಲಿ ಎಂದರಲ್ಲದೇ,
ವಿದ್ಯಾರ್ಥಿಗಳು ಬಾಲ್ಯದಿಂದಲೇ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಪುಸ್ತಕಗಳು, ವೃತ್ತ ಪತ್ರಿಕೆಗಳನ್ನು ಓದುವುದರಿಂದ ಹೊಸ ವಿಚಾರಗಳನ್ನು ತಿಳಿದುಕೊಳ್ಳಲು ಸಾಧ್ಯ. ಯಾವುದೇ ಕಾರ್ಯಕ್ರಮ, ಸ್ಪರ್ಧೆಯಾದರೂ ಅದರಲ್ಲಿ ಭಾಗವಹಿಸುವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದರು.

