ಬೆಂಗಳೂರು, ಅಕ್ಟೋಬರ್ 10: ಕೇಂದ್ರ ಸರ್ಕಾರದ ಅಧೀನದ ಇಲಾಖೆಯ ಕಚೇರಿಗಳು ಕರ್ನಾಟಕದಲ್ಲಿ ನಾಡಭಾಷೆ ಕನ್ನಡವನ್ನು ಕಡೆಗಣಿಸುತ್ತಿರುವುದು ಇಂದು ನಿನ್ನೆಯ ವಿಚಾರವಲ್ಲ. ಕೇಂದ್ರವೇ ಜಾರಿಗೆ ತಂದ ತ್ರಿಭಾಷಾ ನೀತಿಯನ್ನು ಕೇಂದ್ರದ ಅಧಿಕಾರಿಗಳೇ ಗಾಳಿಗೆ ತೂರುತ್ತಿದ್ದಾರೆ. ಇನ್ನು ನೇಮಕಾತಿ ವಿಚಾರದಲ್ಲೂ ಕನ್ನಡಿಗರಿಗೆ ಅನ್ಯಾಯ ಮೇಲಿಂದ ಮೇಲೆ ಆಗುತ್ತಿದೆ. ಬೆಂಗಳೂರಿನಲ್ಲೇ ನೆಲೆಯೂರಿರುವ ಕೇಂದ್ರ ರಕ್ಷಣಾ ಇಲಾಖೆಯ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ 500ಕ್ಕೂ ಹೆಚ್ಚು ಟ್ರೈನಿ ಇಂಜಿನಿಯರ್ಗಳ ನೇಮಕಾತಿ ಅಧಿಸೂಚನೆ ಹೊರಡಿಸಿದ್ದು, ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ಮಾತ್ರ ಅಧಿಸೂಚನೆ ಹೊರಡಿಸಿರುವುಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.
ಅಧಿಸೂಚನೆ ಹಾಗೂ ಅರ್ಜಿಗಳನ್ನು ಕನ್ನಡದಲ್ಲಿ ಬಿಡುಗಡೆ ಮಾಡುವುದರ ಜೊತೆಗೆ ಸ್ಥಳೀಯರಿಗೆ ಶೇ 40ರಷ್ಟು ಹುದ್ದೆಗಳನ್ನ ಮೀಸಲಿಡಬೇಕು ಎಂದೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಕೇಂದ್ರಕ್ಕೆ ಆಗ್ರಹಿಸಿದ್ದಾರೆ. ಅಲ್ಲದೆ ರಾಜ್ಯವನ್ನ ಕೇಂದ್ರದಲ್ಲಿ ಪ್ರತಿನಿಧಿಸುವ ಸಂಸದರು ಈ ಬಗ್ಗೆ ದನಿಯೆತ್ತಬೇಕಿದ್ದು, ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯವನ್ನ ಸರಿಪಡಿಸಬೇಕಿದೆ.


