ಕಾಯಕಲ್ಪಕ್ಕೆ ಕಾದಿರುವ ಕಿತ್ತೂರಿನ ಕಲ್ಮೇಶ್ವರ ದೇವಸ್ಥಾನ

Hasiru Kranti
ಕಾಯಕಲ್ಪಕ್ಕೆ ಕಾದಿರುವ ಕಿತ್ತೂರಿನ ಕಲ್ಮೇಶ್ವರ ದೇವಸ್ಥಾನ
WhatsApp Group Join Now
Telegram Group Join Now

(ರಾಜಶೇಖರ ಕೋಟಿ)
ಚನ್ನಮ್ಮನ ಕಿತ್ತೂರು; ಕಿತ್ತೂರಿನ ಕೋಟೆಯ ಆವರಣದಲ್ಲಿರುವ ಕಲ್ಮೇಶ್ವರ ದೇವಸ್ಥಾನ ಪಾಳು ಬಿದ್ದಿದ್ದು ಈಗ ಕಾಯಕಲ್ಪಕ್ಕೆ ಕಾದಿದೆ.
ರಾಣಿ ಚೆನ್ನಮ್ಮನ ಕಾಲದಲ್ಲಿ ವೈಭವವನ್ನು ಮೆರೆದ ಕಲ್ಮೇಶ್ವರ ದೇವಸ್ಥಾನ ನಂತರದ ದಿನಗಳಲ್ಲಿ ನಿರ್ಲಕ್ಷಕ್ಕೀಡಾಗಿ ಸಂಪೂರ್ಣ ನಶಿಸಿಹೋಗಿತ್ತು. ಅದನ್ನು ಕಿತ್ತೂರಿನ ಕೆಲವು ಭಕ್ತರು ಕೂಡಿ ಮತ್ತೆ ಜೀರ್ಣೋದ್ಧಾರ ಮಾಡಲು ಮುಂದಾದಾಗ ಕಿತ್ತೂರು ಕೋಟೆಯ ವೀಕ್ಷಣೆಗೆ ಬಂದಿದ್ದ ಪ್ರವಾಸಿಗರು ಅದನ್ನು ನೋಡಿ ಕೋರ್ಟಿನಲ್ಲಿ ಮುಖದ್ದಮೆ ಹೂಡಿದ್ದರು. ಐತಿಹಾಸಿಕ ಮಹತ್ವವನ್ನು ಪಡೆದ ಸ್ಥಳಗಳಲ್ಲಿ ಹೊಸ ಕಟ್ಟಡಗಳಿಗೆ ಅವಕಾಶವಿಲ್ಲ ಎಂಬ ಆದೇಶದ ಮೇರೆಗೆ ಅದು ಅರ್ಧಕ್ಕೇ ನಿಂತು ಹೋಯಿತು. ಹೀಗೆ ಅನಿವಾರ್ಯ ಕಾರಣಗಳಿಂದ ಸ್ಥಗಿತಗೊಂಡ ಕಾಮಗಾರಿ ಮತ್ತೆ ಶುರುವಾಗಲೇ ಇಲ್ಲ. ಈ ಘಟನೆ ನಡೆದು ಈಗ ಹತ್ತಾರು ವರ್ಷಗಳು ಕಳೆದಿವೆ.
ಈ ಮಧ್ಯೆ ಸರಕಾರದ ಅನುದಾನದಿಂದಲೇ ಕೋಟೆ ಆವರಣದಲ್ಲಿ ದೊಡ್ಡದಾದ ಅಡಿಟೋರಿಯಂ, ಹೊಸ ಕಟ್ಟಡಗಳು ನಿರ್ಮಾಣಗೊಂಡು ಕಾಂಕ್ರೀಟ್ ರಸ್ತೆಗಳ ಕಾಮಗಾರಿಗಳು ನಡೆದವು. ಇತ್ತೀಚೆಗೆ ಕೋಟೆ ಆವರಣದಲ್ಲಿಯೇ ಇರುವ ಆಂಜನೇಯ ದೇವಸ್ಥಾನವನ್ನು ಸರಕಾರದ ಅನುದಾನದಲ್ಲಿಯೇ ಜೀರ್ಣೋದ್ಧಾರ ಮಾಡಲಾಯಿತು. ಆದರೆ ಕಾನೂನಿನ ಆದೇಶಕ್ಕೆ ಒಳಗಾಗಿದ್ದ ಕಲ್ಮೇಶ್ವರ ದೇವಸ್ಥಾನ ಮಾತ್ರ ಯಾವ ಸುಧಾರಣೆಗಳನ್ನೂ ಕಾಣದೇ ಹಾಗೇ ಉಳಿದು ಹೋಯಿತು.
ಕಿತ್ತೂರಿನ ಜನ ಪ್ರತಿನಿಧಿಗಳಾಗಲಿ ಅಥವಾ ಅದಕ್ಕೆ ಸಂಬಂಧಿಸಿದ ಯಾವುದೇ ಅಧಿಕಾರಿಗಳಾಗಲಿ, ದೇವಸ್ಥಾನದ ಕುರಿತು ಮುತುವರ್ಜಿ ವಹಿಸಿ ಮತ್ತೆ ಅದರ ಜೀರ್ಣೋದ್ಧಾರಕ್ಕೆ ಯಾರೂ ಚಿಂತಿಸಲೇ ಇಲ್ಲ.
ಪ್ರತಿ ವರ್ಷ ಕೋಟೆ ಆವರಣದಲ್ಲಿ ಅತ್ಯಂತ ವಿಜ್ರಂಬಣೆಯಿಂದ ಕಿತ್ತೂರು ಉತ್ಸವವನ್ನು ಆಚರಿಸಲಾಗುತ್ತದೆ. ಅದಕ್ಕಾಗಿ ಕೋಟಿಗಟ್ಟಲೆ ಹಣವನ್ನು ಖರ್ಚು ಮಾಡಲಾಗುತ್ತದೆ. ಆದರೆ ಅಲ್ಲಿಯೇ ಪಾಳು ಬಿದ್ದಿರುವ ದೇವಸ್ಥಾನ ಮಾತ್ರ ಯಾರ ಕಣ್ಣಿಗೂ ಕಾಣುವುದೇ ಇಲ್ಲ.
ಒಂದು ವೇಳೆ ಯಾರಾದರೂ ಈ ಕುರಿತು ಪ್ರಶ್ನಿಸಿದರೆ ಕೋರ್ಟ್ ಆದೇಶ ಇರುವುದರಿಂದ ಏನೂ ಮಾಡಲು ಸಾಧ್ಯವಿಲ್ಲ ಎಂದು ಉತ್ತರಿಸಿ ಅಲ್ಲಿಂದ ಜಾರಿಕೊಳ್ಳುತ್ತಾರೆ.
ಒಂದು ವೇಳೆ ಕಾನೂನು ಕಟ್ಟಳೆಗಳು ಅಷ್ಟು ಬಿಗಿಯಾಗಿದ್ದರೆ ಅದೇ ದೇವಸ್ಥಾನದ ಸುತ್ತಮುತ್ತಲೂ ನಡೆದ ಹೊಸ ಕಟ್ಟಡ ನಿರ್ಮಾಣಗಳಿಗೆ ಏಕೆ ಅನ್ವಯಿಸಲಿಲ್ಲ ಎಂದು ಜನ ಪ್ರಶ್ನಿಸುತ್ತಿದ್ದಾರೆ.
ಈಗಲಾದರೂ ಜನಪ್ರತಿನಿಧಿಗಳು ಗುಡಿಯ ಜೀರ್ಣೋದ್ಧಾರಕ್ಕೆ ಪರ್ಯಾಯ ಮಾರ್ಗ ಹುಡುಕಬೇಕು.ಐತಿಹಾಸಿಕ ಮಹತ್ವ ಹಾಗು ಕುರುಹು ಉಳಿಸಿಕೊಂಡೇ
ದೇವಸ್ಥಾನಕ್ಕೆ ಹೊಸರೂಪ ಕೊಡುವ ಕಾರ್ಯ ನಡೆಯಬೇಕಿದೆ. ರಾಣಿ ಚೆನ್ನಮ್ಮನ ಕೋಟೆಯ ಆವರಣದಲ್ಲಿಯೇ ಇರುವ ಒಂದು ಮಂದಿರ ಪಾಳು ಬಿದ್ದಿರುವುದನ್ನು ನೋಡಲು ಯಾರೂ ಇಷ್ಟಪಡುವುದಿಲ್ಲ.ಕಾನೂನಿನ ಚೌಕಟ್ಟಿನ ಒಳಗೇ ಯೋಜನೆ ರೂಪಿಸಿಕೊಂಡು ಅದಕ್ಕೆ ಕಾಯಕಲ್ಪ ನೀಡಬೇಕಿದೆ.
ಇಲ್ಲಿಯವರೆಗೆ ಆಗದೇ ಉಳಿದ ಕಿತ್ತೂರಿನ ರಸ್ತೆ ಅಗಲೀಕರಣ,ಕೆರೆಗಳ ಸ್ವಚ್ಛತೆ ಹಾಗು ಅವುಗಳನ್ನು ಸುಂದರಗೊಳಿಸಿ ಉದ್ಯಾನ ನಿರ್ಮಾಣ,ಬೇರೆಡೆ ಹೋಗಿದ್ದ ತಾಲೂಕು ಆಸ್ಪತ್ರೆಯನ್ನು ಕಿತ್ತೂರಿಗೆ ತಂದು ಕಟ್ಟುವುದು,ಕೋಟೆ ಆವರಣದಲ್ಲಿ ಥೀಮ್ ಪಾರ್ಕ್ ಯೋಜನೆಯಂತಹ ಹಲವಾರು ಶ್ಲಾಘನೀಯ ಕಾರ್ಯಗಳನ್ನು ಮಾಡುವ ಮೂಲಕ ಜನರಲ್ಲಿ ಹೊಸ ಆಶಾಕಿರಣ ಮೂಡಿಸಿರುವ ನಮ್ಮ ಶಾಸಕರು ಇತ್ತ ಕಡೆ ಲಕ್ಷ್ಯ ಕೊಟ್ಟರೆ ಖಂಡಿತ ಇದು ಅಸಾಧ್ಯದಮಾತೇನಲ್ಲ ಎಂಬುದು ಜನರ ಮನದಾಳದ ನಂಬಿಕೆಯಾಗಿದೆ.
ಇದಕ್ಕೆ ಶಾಸಕ ಬಾಬಾಸಾಹೇಬ ಪಾಟೀಲರು ಹೇಗೆ ಸ್ಪಂದಿಸುತ್ತಾರೆ ಎಂಬುದನ್ನು ಬರುವ ದಿನಗಳಲ್ಲಿ ಕಾದು ನೋಡಬೇಕು.

WhatsApp Group Join Now
Telegram Group Join Now
Share This Article