ಬೆಳಗಾವಿ – ಬೆಳಗಾವಿ ಜಿಲ್ಲೆಯ ಕಿತ್ತೂರು ಕೋಟೆ ಆವರಣದಲ್ಲಿ ಶಿಕ್ಷಣ ತಜ್ಞ, ಸಂಘಟನಾ ಚತುರ ಅಶೋಕ ಉಳ್ಳೇಗಡ್ಡಿ ಅವರ ಅಧ್ಯಕ್ಷತೆಯಲ್ಲಿ ಖ್ಯಾತ ಸಾಹಿತಿಗಳಾದ ಸ.ರಾ.ಸುಳಕೂಡೆ ಮತ್ತು ಯು.ಎನ್.ಸಂಗನಾಳಮಠ ಅವರು ಸಂಪಾದಿಸಿದ ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕದ ಕಲಿಗಳು ಗ್ರಂಥ ಲೋಕಾರ್ಪಣೆ ನಡೆಯಿತು.
ಗ್ರಂಥ ಲೋಕಾರ್ಪಣೆ ಮಾಡಿದ ಕಿತ್ತೂರು ಪೊಲೀಸ್ ಠಾಣೆಯ ಪಿಎಸ್ಐ ಪ್ರವೀಣ ರುದ್ರಗೌಡ ಗಂಗೋಳ ಅವರು ಮಾತನಾಡಿ ಬ್ರಿಟಿಷರ ದಬ್ಬಾಳಿಕೆಯ ವಿರುದ್ಧ ಸಿಡಿದೆದ್ದು ತಮ್ಮ ಪ್ರಾಣವನ್ನು ತೆತ್ತು ಹುತಾತ್ಮರಾದವರು ಎಷ್ಟೋ ಜನರು. ಸ್ವಾತಂತ್ರ್ಯಕ್ಕಾಗಿ ನಾಡಿನ ಏಳ್ಗೆಗಾಗಿ ಆಗಿನ ಎಲ್ಲಾ ಭಾರತೀಯರಲ್ಲಿ ಉತ್ಸಾಹ, ತ್ಯಾಗ ಮನೋಭಾವ, ಕಾರ್ಯತತ್ಪರತೆ, ಅಭಿಮಾನ ಕಾಲಾತೀತ ಮೌಲ್ಯಗಳಾಗಿದ್ದವು.ಈ ದಿಶೆಯಲ್ಲಿ ಕನ್ನಡಿಗರು ವಿವಿಧ ಪ್ರಾಂತಗಳಲ್ಲಿ ಹಂಚಿ ಹೋಗಿದ್ದರು, ಒಟ್ಟಾರೆಯಾಗಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದರು.ಕೆಲವರು ಮಾತ್ರ ಈಗಲೂ ನಮ್ಮ ಮಧ್ಯದಲ್ಲಿದ್ದಾರೆ.ಕರ್ನಾಟಕದ ಕೆಲ ದೇಶಾಭಿಮಾನಿಗಳು ತಮ್ಮ ಕುಟುಂಬ, ಮನೆ, ತ್ಯಾಗ ಮಾಡಿ ದೇಶಕ್ಕಾಗಿ ದುಡಿದಿದ್ದಾರೆ, ಮಾಡಿದಿದ್ದಾರೆ.
ಕೃತಿ ಪರಿಚಯಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಬೆಳಗಾವಿ ಜಿಲ್ಲಾ ಮಾಜಿ ಅಧ್ಯಕ್ಷರಾದ ಮೋಹನ ಬಸನಗೌಡ ಪಾಟೀಲ ಅವರು ಮಾತನಾಡಿ ಈ ಸಂಕಲನದಲ್ಲಿ ಮೊದಲು ಸ್ತ್ರೀ ಸೈನ್ಯ ಕಟ್ಟಿದ ಬೆಳವಡಿ ಮಲ್ಲಮ್ಮ,ಸ್ವಾತಂತ್ರ್ಯ ಕಿಡಿ ಹೊತ್ತಿಸಿದ ಕಿತ್ತೂರ ಚೆನ್ನಮ್ಮ, ಮೊದಲ ಸ್ವಾತಂತ್ರ್ಯ ಸಾರಿದ ಊರು ಈಸೂರು, ಕರ್ನಾಟಕ ಜಲಿಯನ್ ವಾಲಾಬಾಗ್, ಕರ್ನಾಟಕದಲ್ಲಿ ಗಾಂಧೀಜಿ, ವರಕವಿ ಬೇಂದ್ರೆ ಸೆರೆಮನೆ ವಾಸ, ಕರ್ನಾಟಕದಲ್ಲಿ ನೇತಾಜಿ, ಬೆಳಗಾವಿ ಕಾಂಗ್ರೆಸ್ ಅಧಿವೇಶನ ಮುಂತಾದ ರೋಚಕ ಪ್ರಸಂಗಗಳನ್ನು ಕರ್ನಾಟಕದಲ್ಲಿ ಸ್ವಾತಂತ್ರ್ಯ ಹೋರಾಟದ ಪ್ರತೀಕಗಳನ್ನಾಗಿ ಲೇಖಕರು ಇಲ್ಲಿ ಬಿಂಬಿಸಿದ್ದಾರೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದವರನ್ನು ನೆನಪಿಸುವಲ್ಲಿ, ಪರಿಚಯಿಸುವಲ್ಲಿ, “ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕದ ಕಲಿಗಳು” ಕೃತಿಯ ಎಲ್ಲ ಲೇಖನಗಳು ಅಧ್ಯಯನಶೀಲವಾಗಿವೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಖಾನಾಪುರ ತಾಲ್ಲೂಕಿನ ಮಾಜಿ ಅಧ್ಯಕ್ಷರಾದ ವಿಜಯ ಬಡಿಗೇರ ಅವರು ಮಾತನಾಡಿ ಈ ಕೃತಿಯನ್ನು ಅತ್ಯಂತ ಶ್ರದ್ಧೆ ಮತ್ತು ದೇಶಭಕ್ತಿಯ ಹಿನ್ನೆಲೆಯೊಳಗೆ ಕಟ್ಟಿ ಕೊಟ್ಟಿರುವ ಹಿರಿಯ ಸಾಹಿತಿಗಳಾದ ಸ.ರಾ. ಸುಳಕೂಡೆ ಮತ್ತು ಯು.ಎನ್. ಸಂಗನಾಳಮಠ ಇವರೀರ್ವರ ಕಾರ್ಯ ಮೆಚ್ಚುವಂಥದ್ದು ಎಂದರು.
ಸಂಪಾದಕರಾದ ಸ.ರಾ.ಸುಳಕೂಡೆ ಆಧುನಿಕ ಭಾರತದ ಚರಿತ್ರೆ ಹೆಚ್ಚು ಸಂಕೀರ್ಣ ಸ್ವರೂಪ ಹೊಂದಿದೆ. ಬ್ರಿಟಿಷ್ ವಸಾಹತು ಇದಕ್ಕೆ ಮುಖ್ಯ ಕಾರಣ. ಅಧೀನತೆಯ ನಡುವೆಯೂ ದೇಶೀಯ ಅರಸರು,ರಾಣಿಯರು,ಸಂಸ್ಥಾನಿಕರು, ಸರ್ವಾಧಿಕಾರಿ ಧೋರಣೆ ದೌರ್ಜನ್ಯಗಳನ್ನು ವಿರೋಧಿಸುತ್ತಲೇ ಬಂದರು. ಇದಕ್ಕೆ ಸಂಬಂಧಿಸಿದಂತೆ ಕರ್ನಾಟಕದಲ್ಲೂ ವರ್ಣ ರಂಜಿತ ರಕ್ತಸಿಕ್ತ ಇತಿಹಾಸವಿದೆ. ಈ ಇತಿಹಾಸವನ್ನು ಅನಾವರಣಗೊಳಿಸುವುದು ಈ ಕೃತಿಯ ಮುಖ್ಯ ಉದ್ದೇಶ ಎಂದರು.
ಸಾನಿಧ್ಯ ವಹಿಸಿದ ಬೆಂಗಳೂರು ಪೂರ್ಣೋದಯ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷರಾದ ಡಾ. ಸಿದ್ದೇಶ್ವರ ದೇವರು ಮಾತನಾಡಿ ಈ ಕೃತಿ ಇಂದಿನ ಯುವ ಪೀಳಿಗೆಗೆ ಸ್ಪೂರ್ತಿಯ ಸೆಲೆಯಾಗಿದೆ ಎಂದರು.
ಕವಿ ಅಪ್ಪಾಸಾಹೇಬ ಲಿಂಬಿಗಿಡದ ಸ್ವಾಗತಿಸಿದರು, ಕವಿ ಜಗದೀಶ ಧಾರವಾಡ ವಂದಿಸಿದರು.


