ನವದೆಹಲಿ, ನವೆಂಬರ್ 19: ಕೇಂದ್ರ ಚುನಾವಣಾ ಆಯೋಗವನ್ನು ಬೆಂಬಲಿಸಿ ನ್ಯಾಯಮೂರ್ತಿಗಳು, ನಿವೃತ್ತ ಅಧಿಕಾರಿಗಳು ಬಹಿರಂಗ ಪತ್ರ ಬರೆದಿದ್ದಾರೆ. ಚುನಾವಣಾ ಆಯೋಗದಂತಹ ಸಾಂವಿಧಾನಿಕ ಸಂಸ್ಥೆಗಳ ಮೇಲೆ ಕಳಂಕ ಹೊರಿಸಲು ಯತ್ನಿಸುತ್ತಿರುವ ಕಾಂಗ್ರೆಸ್ ಪಕ್ಷದ ವಿರುದ್ಧವಾಗಿ 16 ನ್ಯಾಯಮೂರ್ತಿಗಳು, 123 ನಿವೃತ್ತ ಅಧಿಕಾರಿಗಳು, 133 ಸಶಸ್ತ್ರ ಪಡೆಗಳ ನಿವೃತ್ತ ಅಧಿಕಾರಿಗಳು ಸೇರಿದಂತೆ 272 ಗಣ್ಯ ನಾಗರಿಕರ ಗುಂಪು ಪತ್ರ ಬರೆದಿದೆ. ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಅನ್ನು ಖಂಡಿಸಿ ಬಹಿರಂಗ ಪತ್ರ ಬರೆಯಲಾಗಿದೆ.
ಪತ್ರದಲ್ಲಿ ಸಹಿ ಮಾಡಿರುವವರಲ್ಲಿ ಜಮ್ಮು ಮತ್ತು ಕಾಶ್ಮೀರದ ಮಾಜಿ ಡಿಜಿಪಿ ಎಸ್ಪಿ ವೈದ್, ಮಾಜಿ ರಾ ಮುಖ್ಯಸ್ಥ ಸಂಜೀವ್ ತ್ರಿಪಾಠಿ, ಮಾಜಿ ಐಎಫ್ಎಸ್ ಲಕ್ಷ್ಮಿ ಪುರಿ ಮತ್ತು ಇತರರಿದ್ದಾರೆ. ಎಸ್ಐಆರ್ ಪ್ರಕ್ರಿಯೆ ಮತ್ತು ಚುನಾವಣಾ ಆಯೋಗವನ್ನು ರಾಹುಲ್ ಗಾಂಧಿ ನಿರಂತರವಾಗಿ ಟೀಕಿಸುತ್ತಿರುವ ನಡುವೆಯೇ ಈ ಬೆಳವಣಿಗೆ ಸಂಭವಿಸಿದೆ. ರಾಹುಲ್ ಗಾಂಧಿ ಪತ್ರಿಕಾಗೋಷ್ಠಿಯಲ್ಲಿ ಮತಗಳ್ಳತನಕ್ಕೆ ಚುನಾವಣಾ ಆಯೋಗ ಅನುಕೂಲ ಮಾಡಿಕೊಡುತ್ತಿದೆ ಎಂದು ದೂರಿದ್ದರು.
ಎಸ್ಐಆರ್ ಪ್ರಕ್ರಿಯೆಯ ಸಮಯದಲ್ಲಿ ಚುನಾವಣಾ ಆಯೋಗದ ನಡವಳಿಕೆ ತೀವ್ರ ನಿರಾಶಾದಾಯಕವಾಗಿದೆ ಎಂದು ಕಾಂಗ್ರೆಸ್ ಹೇಳಿತ್ತು. ಚುನಾವಣಾ ಸಂಸ್ಥೆಯು ಬಿಜೆಪಿಯ ಪ್ರಭಾವದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ತಕ್ಷಣವೇ ಪ್ರದರ್ಶಿಸಬೇಕೆಂದು ಒತ್ತಾಯಿಸಿತ್ತು.


