ಗ್ರಾಹಕರ ಹಕ್ಕುಗಳ ಅರಿವು ಮೂಡಿಸಲು ಜಾಗೃತಿ ಅಗತ್ಯ : ನ್ಯಾಯಾಧೀಶ ಎನ್. ಸುಬ್ರಹ್ಮಣ್ಯ

Hasiru Kranti
ಗ್ರಾಹಕರ ಹಕ್ಕುಗಳ ಅರಿವು ಮೂಡಿಸಲು ಜಾಗೃತಿ ಅಗತ್ಯ : ನ್ಯಾಯಾಧೀಶ ಎನ್. ಸುಬ್ರಹ್ಮಣ್ಯ
WhatsApp Group Join Now
Telegram Group Join Now

ವಿಜಯನಗರ (ಹೊಸಪೇಟೆ),): ಭಾರತದಲ್ಲಿ ಗ್ರಾಹಕರ ಹಿತಾಸಕ್ತಿ ಕಾಪಾಡಲು ಮತ್ತು ವಂಚನೆಗಳನ್ನು ತಡೆಯಲು ಭಾರತದ ಕಾನೂನು ವ್ಯವಸ್ಥೆಯಲ್ಲಿ ಅನೇಕ ಗ್ರಾಹಕರ ಹಕ್ಕುಗಳಿದ್ದು ಅವುಗಳ ಬಗ್ಗೆ ಪ್ರತಿಯೊಬ್ಬ ಗ್ರಾಹಕರು ಸಹ ತಿಳಿದುಕೊಳ್ಳವುದು ಅವಶ್ಯಕವಾಗಿದೆ ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಧೀಶ ಮತ್ತು ಹೊಸಪೇಟೆ ಕಾನೂನು ಸೇವಾ ಸಮಿತಿಯ ಅಧ್ಯಕ್ಷರಾದ ಎನ್.ಸುಬ್ರಹ್ಮಣ್ಯ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಕಾನೂನು ಮಾಪನಶಾಸ್ತ್ರ ಇಲಾಖೆ , ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಜಿಲ್ಲಾ ವಕೀಲರ ಸಂಘ, ಕಂದಾಯ ಇಲಾಖೆ, ಪೊಲೀಸ್ ಇಲಾಖೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಸಹಯೋಗದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಮತ್ತು ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಂಗಳವಾರ ಮಾತನಾಡಿದರು.
ಗ್ರಾಹಕರ ಹಿತಾಸಕ್ತಿಗಳನ್ನು ರಕ್ಷಿಸಲು 1986 ಮೊದಲ ಪ್ರಬಲ ಕಾನೂನು ಗ್ರಾಹಕ ಸಂರಕ್ಷಣಾ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಈ ಕಾಯ್ದೆಯು ಮೂರು ಹಂತದ ನ್ಯಾಯಾಂಗ ವ್ಯವಸ್ಥೆಯನ್ನು ಹೊಂದಿದ್ದು, ಗ್ರಾಹಕರಿಗೆ ಒಂದು ಕೋಟಿರೂ ವರಗೆ ಜಿಲ್ಲಾ ಮಟ್ಟದ ಜಿಲ್ಲಾ ಗ್ರಾಹಕರ ವೇದಿಕೆ , 1 ರಿಂದ 10 ಕೋಟಿಯ ವರಗೆ ರಾಜ್ಯ ಗ್ರಾಹಕರ ವೇದಿಕೆ ಮತ್ತು 10 ಕೋಟಿಗಳಿಗಿಂತ ಹೆಚ್ಚು ಸರಕು ಮತ್ತು ಸೇವೆಗಳಲ್ಲಿ ವಂಚನೆಯಾದಲ್ಲಿ ವೇದಿಕೆ ಗಳಿಗೆ ದೂರು ಸಲ್ಲಿಸಿ ಪರಿಹಾರವನ್ನು ಪಡೆಯಬಹುದು. ಈ ಕಾಯ್ದೆಯು ಗ್ರಾಹಕರಿಗೆ ಸುರಕ್ಷತೆಯ ಹಕ್ಕು, ಮಾಹಿತಿ ಪಡೆಯುವ ಹಕ್ಕು, ಆಯ್ಕೆ ಮಾಡುವ ಹಕ್ಕು, ದೂರು ಸಲ್ಲಿಸುವ ಹಕ್ಕು, ಪರಿಹಾರ ಪಡೆಯುವ ಹಕ್ಕು ಮತ್ತು ಗ್ರಾಹಕರ ಶಿಕ್ಷಣದ ಆರು ಮೂಲಭೂತ ಹಕ್ಕುಗಳನ್ನು ಒದಗಿಸಲಾಗುತ್ತದೆ. 2025ರಲ್ಲಿ ಈ ಕಾಯ್ದೆಯ ಜಾಗದಲ್ಲಿ ಹೊಸ 2019 ರ ಕಾಯ್ದೆ ಜಾರಿಯಲ್ಲಿದೆ. ಆನ್ ಲೈನ್ ವಹಿವಾಟುಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಿದ್ದು ಇದರಲ್ಲಿ ವಂಚನೆಯಾದರೆ ಗ್ರಾಹಕರು 2019 ರ ಗ್ರಾಹಕರ ಸಂರಕ್ಷಣಾ ಕಾಯ್ದೆಯಡಿ ದೂರು ಸಲ್ಲಿಸಬಹುದು. ರೈತರು ಸಹ ಬಿತ್ತನೆ ಬೀಜ ಮತ್ತು ರಸಗೊಬ್ಬರ ಸೇರಿ ಇತರೆ ಸರಕುಗಳಲ್ಲಿ ವಂಚನೆಯಾದಲ್ಲಿ ಅವರು ಗ್ರಾಹಕರ ವೇದಿಕೆಯಲ್ಲಿ ದೂರುಗಳನ್ನು ಸಲ್ಲಿಸಬಹುದು ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶ ಪ್ರಶಾಂತ್ ನಾಗಲಾಪುರ್ ಮಾತನಾಡಿ, ಎರಡನೇ ಮಹಾಯುದ್ದ ನಂತರ ಮಾನವ ಹಕ್ಕುಗಳ ರಕ್ಷಣೆಗಾಗಿ ವಿಶೇಷವಾಗಿ ಮಾನವ ಹಕ್ಕುಗಳ ಆಯೋಗವನ್ನು ಸ್ಥಾಪನೆ ಮಾಡಲಾಯಿತು. ಮಾನವ ಹಕ್ಕುಗಳ ರಕ್ಷಣೆಯು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಿದೆ. ಹುಟ್ಟಿನಿಂದಲೇ ಮಾನವ ಹಕ್ಕುಗಳು ಬರುತ್ತವೆ. ಮಾನವ ಹಕ್ಕುಗಳ ಉಲ್ಲಂಘನೆಯಾದಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ಮಾನವ ಹಕ್ಕುಗಳ ಆಯೋಗ ಇದ್ದು, ಅಲ್ಲಿ ದೂರು ಸಲ್ಲಿಸಬಹುದು. ಪ್ರತಿಯೊಬ್ಬ ವ್ಯಕ್ತಿಯ ಘನತೆ, ಸಮಾನತೆ ಮತ್ತು ಸ್ವಾತಂತ್ರ‍್ಯವನ್ನು ಖಾತ್ರಿಪಡಿಸುವ ಈ ಹೆಗ್ಗುರುತು ದಾಖಲೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ವ್ಯಾಪಾರ ಕಾನೂನು ಬಾಹಿರವಾಗಿ ವ್ಯಾಪಾರ ಮಾಡಬಾರದು ಎಂದರು.
ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ ಮಾತನಾಡಿ, ಮುಖ್ಯವಾಗಿ ಗ್ರಾಹಕರು ಖರೀದಿಸುವ ಸಮಯದಲ್ಲಿ ಸರಕಿನ ಮೌಲ್ಯ ಮತ್ತು ಅದರ ಗುಣಮಟ್ಟವನ್ನು ತಿಳಿದುಕೊಳ್ಳಬೇಕು. ಇಂದಿನ ದಿನಮಾನದಲ್ಲಿ ಜಾಹಿರಾತುಗಳು ಮಾರುಕಟ್ಟೆಯಲ್ಲಿ ಪ್ರಭಾವನ್ನು ಬಿರುತ್ತಿವೆ. ಜಾಹಿರಾತಿಗೆ ನೆಚ್ಚಿಕೊಂಡು ಸರಕುಗಳನ್ನು ತೆಗೆದುಕೊಳ್ಳದೆ ಅದನ್ನು ಸರಿಯಾಗಿ ಪರಿಶೀಲಿಸಿ ಖರೀಸದಿಸಬೇಕು. ಮಾನವ ಹಕ್ಕುಗಳ ದಿನಾಚರಣೆಯು ಸಮಾನತೆ, ನ್ಯಾಯ ಮತ್ತು ಮಾನವ ಘನತೆಯ ತತ್ವಗಳನ್ನು ಎತ್ತಿಹಿಡಿಯಲು ಮತ್ತು ತಾರತಮ್ಯದ ವಿರುದ್ಧ ಹೋರಾಡಲು ಪ್ರೋತ್ಸಾಹಿಸುತ್ತದೆ. ಯಾವುದೇ ಜಾತಿ ಜನಾಂಗ, ಬಣ್ಣ, ಧರ್ಮ, ಲಿಂಗ, ಭಾಷೆ, ರಾಜಕೀಯ, ಸ್ಥಾನಮಾನಗಳಿಗೆ ಬೆಲೆ ಕೊಡದೇ ಎಲ್ಲರೂ ಕೂಡ ಸರಿಸಮಾನರು. ಹೀಗಾಗಿ ಸಮಾಜದಲ್ಲಿರುವ ಪ್ರತಿಯೊಬ್ಬರು ಬದುಕುವ ಹಕ್ಕು ನೊಂದಿಗೆ ಇತರೆ ಹಕ್ಕುಗಳನ್ನು ಹೊಂದಿದ್ದಾರೆ ಎಂದರು.
ಈ ವೇಳೆ ಮಾನವ ಹಕ್ಕುಗಳ ಪ್ರತಿಜ್ಞಾ ವಿಧಿಯನ್ನು ಸ್ವಿಕರಿಸಲಾಯಿತು.
ಕಾರ್ಯಕ್ರಮದಲ್ಲಿ ಹಿರಿಯ ವಕೀಲರಾದ ಜಂಬಣ್ಣ ಮತ್ತು ಎ.ಕರುಣನಿಧಿ ಉಪನ್ಯಾಸ ನೀಡಿದರು. ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಪಿ.ಶ್ರೀನಿವಾಸಮೂರ್ತಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕ ರಿಯಾಜ್, ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕ ಮನೋಜ್ ಕುಮಾರ್ ಇದ್ದರು.

WhatsApp Group Join Now
Telegram Group Join Now
Share This Article