ಸದ್ಯದಲ್ಲೇ ತೆರೆಗೆ ಬರಲಿದೆ ಅಜನೀಶ್ ಲೋಕನಾಥ್ ನಿರ್ಮಾಣ, ಸಿ.ಆರ್ ಬಾಬಿ ನಿರ್ದೇಶನ ಹಾಗೂ ಶೈನ್ ಶೆಟ್ಟಿ – ಅಂಕಿತ ಅಮರ್ ಅಭಿನಯದ ಚಿತ್ರ ‘ಜಸ್ಟ್ ಮ್ಯಾರೀಡ್’ .
‘ಕಾಂತಾರ’ ದಂತಹ ವಿಶ್ವವಿಖ್ಯಾತ ಚಿತ್ರದ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ‘ಜಸ್ಟ್ ಮಾರೀಡ್’ ಚಿತ್ರದ ಮೂಲಕ ನಿರ್ಮಾಪಕರಾಗಿದ್ದಾರೆ. ಅವರು ಹಾಗೂ ಸಿ.ಆರ್ ಬಾಬಿ ಈ ಪ್ರೇಮ ಕಥಾನಕವನ್ನು ನಿರ್ಮಾಣ ಮಾಡಿದ್ದಾರೆ. ಸಂಗೀತ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಸಿ.ಆರ್.ಬಾಬಿ ಅವರ ಚೊಚ್ಚಲ ನಿರ್ದೇಶನದಲ್ಲಿ ಬಿಗ್ ಬಾಸ್ ಖ್ಯಾತಿಯ ಶೈನ್ ಶೆಟ್ಟಿ ಹಾಗೂ ಅಂಕಿತ ಅಮರ್ ನಾಯಕ-ನಾಯಕಿಯಾಗಿ ನಟಿಸಿರುವ ಚಿತ್ರವಾಗಿದೆ ‘ಜಸ್ಟ್ ಮ್ಯಾರೀಡ್’.
ಇತ್ತೀಚೆಗೆ ಈ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣಪತ್ರವನ್ನು ನೀಡಿದೆ. ಸದ್ಯದಲ್ಲೇ ನಿರ್ಮಾಪಕರು ಬಿಡುಗಡೆ ದಿನಾಂಕವನ್ನು ತಿಳಿಸಲಿದ್ದಾರೆ.
ದೇವರಾಜ್, ಅಚ್ಯುತಕುಮಾರ್, ಮಾಳವಿಕ ಅವಿನಾಶ್, ಅನೂಪ್ ಭಂಡಾರಿ, ಶ್ರುತಿ ಹರಿಹರನ್, ಶ್ರುತಿ ಕೃಷ್ಣ, ಸಾಕ್ಷಿ ಅಗರವಾಲ್, ಶ್ರೀಮಾನ್, ರವಿಶಂಕರ್ ಗೌಡ, ರವಿ ಭಟ್, ವಾಣಿ ಹರಿಕೃಷ್ಣ, ಸಂಗೀತ, ಅನಿಲ್, ವೇದಿಕಾ ಕಾರ್ಕಳ್ ಮುಂತಾದವರು ಅಭಿನಯಿಸಿದ್ದಾರೆ.
ಸಿ.ಆರ್. ಬಾಬಿ ಅವರೇ ಕಥೆ ಬರೆದಿದ್ದು ಅವರೊಂದಿಗೆ ಚಿತ್ರಕಥೆಯಲ್ಲಿ ಭಾಗಿಯಾಗಿದ್ದಾರೆ ಧನಂಜಯ್ ರಂಜನ್. ರಘು ನಿಡುವಳ್ಳಿ ಸಂಭಾಷಣೆ ರಚಿಸಿದ್ದಾರೆ. ಪಿ ಜಿ ಛಾಯಾಗ್ರಹಣ, ಶ್ರೀಕಾಂತ್ ಮತ್ತು ಪ್ರತೀಕ್ ಶೆಟ್ಟಿ ಸಂಕಲನ, ಅಮರ್ ಕಲಾ ನಿರ್ದೇಶನ, ವಿಕ್ರಮ್ ಸಾಹಸ ನಿರ್ದೇಶನ ಹಾಗೂ ಬಾಬಾ ಭಾಸ್ಕರ್, ಶಾಂತಿ ಅರವಿಂದ್ ಅವರ ನೃತ್ಯ ನಿರ್ದೇಶನವಿರುವ “ಜಸ್ಟ್ ಮ್ಯಾರೀಡ್” ಚಿತ್ರದ ಹಾಡುಗಳನ್ನು ಕೆ.ಕಲ್ಯಾಣ್, ಡಾ.ವಿ.ನಾಗೇಂದ್ರಪ್ರಸಾದ್, ಪ್ರಮೋದ್ ಮರವಂತೆ, ಧನಂಜಯ್ ರಂಜನ್ ಮತ್ತು ಶಶಿ ಕಾವೂರ್ ಬರೆದಿದ್ದಾರೆ.