ನವದೆಹಲಿ: ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರ ಅನಿರೀಕ್ಷಿತ ರಾಜೀನಾಮೆ ಹಲವು ಅನುಮಾನಗಳನ್ನು ಹುಟ್ಟುಹಾಕಿದ್ದು, ಈ ನಡುವಲ್ಲೇ ಕಾಂಗ್ರೆಸ್ ನೀಡಿರುವ ಹೇಳಿಕೆಯೊಂದು ವಿವಾಧ ಭುಗಿಲೇಳುವಂತೆ ಮಾಡಿದೆ.
ಕೇಂದ್ರ ಸರ್ಕಾರದ ಪ್ರಮುಖ ಸಚಿವರಾದ ಜೆ.ಪಿ. ನಡ್ಡಾ ಮತ್ತು ಕಿರಣ್ ರಿಜಿಜು ಅವರು ನಿರ್ಣಾಯಕ ವ್ಯವಹಾರ ಸಲಹಾ ಸಮಿತಿ (ಬಿಎಸಿ) ಸಭೆಯಲ್ಲಿ ಗೈರುಹಾಜರಾಗಿರುವುದು ಮತ್ತು ಮೇಲ್ಮನೆಯಲ್ಲಿ ನಡ್ಡಾ ಅವರ ಹೇಳಿಕೆಗಳೇ ರಾಜೀನಾಮೆಗೆ ಕಾರಣ ಎಂದು ಕಾಂಗ್ರೆಸ್ ಆರೋಪಿಸಿದೆ.
ಸೋಮವಾರ (ಜುಲೈ 21) ನಡೆದ ಬಿಎಸಿ ಸಭೆಯಲ್ಲಿ ಸದನದ ನಾಯಕ ನಡ್ಡಾ ಮತ್ತು ಸಂಸದೀಯ ವ್ಯವಹಾರಗಳ ಸಚಿವ ರಿಜಿಜು ಅವರ ಅನುಪಸ್ಥಿತಿಯಿಂದ ಧನಕರ್ ಅವರು ಅಸಮಾಧಾನಗೊಂಡಿದ್ದಾರೆ ಎಂದು ಕಾಂಗ್ರೆಸ್ ವಾದಿಸಿದೆ.
ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳ ಗದ್ದಲಕ್ಕೆ ಪ್ರತಿಕ್ರಿಯೆ ನೀಡುವಾಗ ಮಾತನಾಡಿದ ನಡ್ಡಾ ಅವರು, ಇಲ್ಲಿ “ಯಾವುದೂ ದಾಖಲಾಗುವುದಿಲ್ಲ ಮತ್ತು ನಾನು ಹೇಳುವುದು ಮಾತ್ರ ದಾಖಲಾಗುತ್ತದೆ ಎಂದು ಹೇಳಿದ್ದರು. ಇದು ಉಪರಾಷ್ಟ್ರಪತಿಗೆ ಮಾಡಿದ “ಅವಮಾನ” ಎಂದು ಕರೆದಿದೆ. ಅಲ್ಲದೆ, ಧನಕರ್ ಅವರ ದಿಢೀರ್ ರಾಜೀನಾಮೆಗೆ ಈ ಬೆಳವಣಿಗೆಯೇ ಕಾರಣ ಎಂದು ಆರೋಪಿಸಿದೆ.