ಬೆಳಗಾವಿ: ಬೆಳಗಾವಿ ಪ್ರತ್ರಕರ್ತರ ಸಂಘದ ವತಿಯಿಂದ ನಗರದ ಎಸ್ ಜಿ ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಶಿವಕುಮಾರ ಸಂಬರಗಿಮಠ ಸಭಾಗೃದಲ್ಲಿ ಆಯೋಜಿಸಲಾಗಿದ್ದ ಪತ್ರಕರ್ತರ ಮಕ್ಕಳ ‘ಪ್ರತಿಭಾ ಪುರಸ್ಕಾರ’ ಕಾರ್ಯಕ್ರಮ ಶನಿವಾರ ಅದ್ದೂರಿಯಾಗಿ ಜರುಗಿತು.
ಈ ಸಂದರ್ಭದಲ್ಲಿ ಎಸ್ಎಸ್ಎಲ್ಸಿ/ ಪಿಯುಸಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 25 ಮಕ್ಕಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೆಎಲ್ಇ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅವರು, “ಪತ್ರಕರ್ತರ ವೃತ್ತಿಜೀವನ ಸಾಕಷ್ಟು ಕಷ್ಟಕರವಾಗಿರುತ್ತದೆ. ಬಿಡುವಿಲ್ಲದ ಕೆಲಸವಿರುವ ಕಾರಣ ಅವರು ತಮ್ಮ ಕುಟುಂಬದ ಕಡೆಗೆ, ಮಕ್ಕಳತ್ತ ಗಮನ ಹರಿಸುವುದು ಕಡಿಮೆ. ಇಂತಹ ಸಂದರ್ಭದಲ್ಲಿ ಸಾಧನೆ ತೋರಿದ ಪತ್ರಕರ್ತರ ಮಕ್ಕಳಿಗೆ ಪ್ರೋತ್ಸಾಹಿಸಿ ಸನ್ಮಾನಿಸುತ್ತಿರುವ ಈ ಕಾರ್ಯಕ್ರಮ ಐತಿಹಾಸಿಕವಾದುದು. ಯಾವತ್ತಿದ್ದರೂ ಮಕ್ಕಳು ನನ್ನ ಮೊದಲ ಆದ್ಯತೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ನನಗೆ ಅತೀವ ಸಂತೋಷ ತಂದಿದೆ ಎಂದರು. ಮಕ್ಕಳ ಕಡೆ ಗಮನ ಇರಲಿ, ನಿಮ್ಮ ಅರೋಗ್ಯವನ್ನೂ ಕಾಪಾಡಿಕೊಳ್ಳಿ. ಪತ್ರಕರ್ತರು ಸಮಾಜದ ಅವಿಭಾಜ್ಯ ಘಟಕ” ಎಂದು ಇದೇ ಸಂದರ್ಭದಲ್ಲಿ ಅವರು ಪತ್ರಕರ್ತರಿಗೆ ಕಿವಿಮಾತು ಹೇಳಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಬೆಳಗಾವಿ ಉತ್ತರ ಶಾಸಕ ಅಭಯ ಪಾಟೀಲ, ಇವತ್ತು ಬೆಳಗಾವಿ ಇಷ್ಟೊಂದು ಅಭಿವೃದ್ಧಿಯಾಗಲು ಜನಪ್ರತಿನಿಧಿಗಳು ಎಷ್ಟು ಕಾರಣವೋ, ಪತ್ರಕರ್ತರ ಪಾತ್ರವೂ ಅಷ್ಟೇ ಮುಖ್ಯವಾಗಿದೆ. ಹಿಂದಿನ ಸರ್ಕಾರದಲ್ಲಿ ಬೆಳಗಾವಿಯ ಪತ್ರಕರ್ತರಿಗಾಗಿ ಒಂದು ಪ್ರತ್ಯೇಕ ಕಾಲನಿ ಮಾಡುವ ಪ್ರಯತ್ನ ಮಾಡಿದ್ದೆವು. ಆದರೆ ಸಮಯದ ಅಭಾವದಿಂದ ಅದು ಕಾರ್ಯಗತವಾಗಲಿಲ್ಲ. ಇಂದಿನ ಸರ್ಕಾರದ ಮುಂದೆ ಪ್ರಸ್ತಾಪ ಇಟ್ಟು, ಪತ್ರಕರ್ತರ ಬೇಡಿಕೆ ಈಡೇರಿಸಲು ಪ್ರಯತ್ನ ಪಡುವುದಾಗಿ ಭರವಸೆ ನೀಡಿದರು.
ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಅಸೀಫ್ ಸೇಠ ಮಾತನಾಡಿ, ಮಕ್ಕಳು ಬರೀ ಅವರ ಭವಿಷ್ಯವಲ್ಲ. ಅವರು ತಮ್ಮ ಕುಟುಂಬ ಮತ್ತು ದೇಶದ ಭವಿಷ್ಯ. ಜಗತ್ತಿನ ಯಾವುದೇ ದೊಡ್ಡ ಕಂಪನಿ ತೆಗೆದುಕೊಳ್ಳಿ. ಅಲ್ಲಿ ಭಾರತೀಯರು ಕಾಣುತ್ತಾರೆ. ಅದಕ್ಕೆ ಅವರ ಶ್ರಮ ಮತ್ತು ಬುದ್ಧಿವಂತಿಕೆ ಕಾರಣ. “ನೀವೂ ಕೂಡ ವಿದ್ಯಾರ್ಥಿ ಜೀವನದಲ್ಲಿ ಚೆನ್ನಾಗಿ ಶ್ರಮ ಪಟ್ಟಿದ್ದೇ ಆದಲ್ಲಿ ಒಳ್ಳೆಯ ಭವಿಷ್ಯ ನಿಮಗೆ ಸಿಗಲಿದೆ” ಎಂದು ಸನ್ಮಾನಿಸಿಕೊಂಡ ಪತ್ರಕರ್ತರ ಮಕ್ಕಳನ್ನು ಉದ್ದೇಶಿಸಿ ಹೇಳಿದರು.
ಮೇಯರ್ ಮಂಗೇಶ ಪವಾರ, ಉಪಮೇಯರ ವಾಣಿ ವಿಲಾಸ ಜೋಶಿ, ನಗರ ಪೊಲೀಸ್ ಆಯುಕ್ತ ಭೂಷಣ ಬೋರಸೆ, ಬೆಳಗಾವಿ ಪತ್ರಕರ್ತರ ಸಂಘದ ಅಧ್ಯಕ್ಷ ವಿಲಾಸ ಜೋಶಿ ಮಾತನಾಡಿದರು.
ಶ್ರೀಶೈಲ ಮಠದ ಅತಿಥಿಗಳನ್ನು ಸ್ವಾಗತಿದರು. ರವೀಂದ್ರ ಉಪ್ಪಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುನಿತಾ ದೇಸಾಯಿ ಕಾರ್ಯಕ್ರಮ ನಿರೂಪಿಸಿ, ಸಂತೋಷ ಚುನಗುಡಿ ವಂದಿಸಿದರು. ಚುಕ್ಕಿ ಸಾಂಸ್ಕೃತಿಕ ಅಕ್ಯಾಡೆಮಿಯ ಮಹಿಳಾ ಸದಸ್ಯರು ಸಂಗೀತದ ರಸದೌತಣ ನೀಡಿದರು.
ಬೆಳಗಾವಿ ಪತ್ರಕರ್ತರ ಸಂಘದ ಪದಾಧಿಕಾರಿಗಳಾದ ಮಹೇಶ ಬಿಜಾಪುರೆ, ಸುರೇಶ ನೇರ್ಲಿ, ಸಂಜಯ ಸೂರ್ಯವಂಶಿ, ರಾಜು ಗವಳಿ, ವಿನಾಯಕ ಮಠಪತಿ, ಕೀರ್ತಿ ಕಾಸರಗೋಡು, ಮುನ್ನಾ ಬಾಗವಾನ, ಮಂಜುನಾಥ ಕೋಳಿಗುಡ್ಡ, ಸುನೀಲ ಪಾಟೀಲ, ರಾಜು ಹಿರೇಮಠ, ಅರುಣ ಯಳ್ಳೂರಕರ, ಇಮಾಮ ಗೂಡುನವರ, ಕುಂತಿನಾಥ ಕಲಮನಿ, ಹೆಚ್.ವಿ.ನಾಗರಾಜ, ರವಿ ಗೋಸಾವಿ, ಪಿ.ಕೆ.ಬಡಿಗೇರ, ರಜನಿಕಾಂತ ಯಾದವಾಡ, ರಾಮಚಂದ್ರ ಸುಣಗಾರ ಸೇರಿದಂತೆ ಬಹುತೇಕ ಪತ್ರಕರ್ತರು ಉಪಸ್ಥಿತರಿದ್ದರು.