ಹುಬ್ಬಳ್ಳಿ,ಏಪ್ರಿಲ್ 11: ದ್ವಿತೀಯ ಪಿ.ಯು.ಸಿ ಯ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಬಂದಿರುವ ವಿಜಯಪುರದ ಹುಡುಗ, ತನಗೆ ಗೃಹಲಕ್ಷ್ಮಿ ಯೋಜನೆಯ ಹಣದಿಂದ ಅನುಕೂಲವಾಯಿತು ಎಂಬ ಹೇಳಿಕೆ ಇದೀಗ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಡುವಣ ವಾಕ್ ಸಮರಕ್ಕೆ ಕಾರಣವಾಗಿದೆ.
ಈ ಬಾಲಕನ ಹೇಳಿಕೆಯ ವಿಡಿಯೋವನ್ನು ಸಿಎಂ ಸಿದ್ದರಾಮಯ್ಯ, ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ಪಕ್ಷದ ಹಲವು ನಾಯಕರು ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಬಡ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಗೃಹಲಕ್ಷ್ಮೀ ಯೋಜನೆಯ ಹಣ ಸಹಾಯ ಮಾಡುತ್ತಿದೆ ಎಂದು ಫೋಸ್ಟ್ ಮಾಡುತ್ತಿದ್ದಾರೆ. ಇದಕ್ಕೆ ಪ್ರಹ್ಲಾದ್ ಜೋಶಿ ಲೇವಡಿ ಮಾಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ‘ಯಾರದಾದ್ರೂ ಮನೇಲಿ ಮಗು ಹುಟ್ಟಿದ್ರೂ, ಕಾಂಗ್ರೆಸ್ ನವರು 2 ಸಾವಿರದಿಂದ ಹುಟ್ಟಿದ್ದು ಅಂತಾರೆ’ ಎಂದು ವ್ಯಂಗ್ಯವಾಡಿದರು.
ಇದೇ ವೇಳೆ ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ಪಕ್ಷಕ್ಕೆ ದ್ರೋಹ ಬಗೆದಿದ್ದಾರೆ. ಅವರ ಪುತ್ರನ ಕಾಂಗ್ರೆಸ್ ಸೇರ್ಪಡೆ ಅಚ್ಚರಿಯಲ್ಲ, ದಿಂಗಾಲೇಶ್ವರ ಸ್ವಾಮೀಜಿ ವಿರುದ್ಧ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ದಿಂಗಾಲೇಶ್ವರರ ಮಾತುಗಳು ನನಗೆ ಆಶಿರ್ವಾದ ಎಂದು ಹೇಳಿದರು.
ಕಾಂಗ್ರೆಸ್ನಿಂದ ದಿಂಗಾಲೇಶ್ವರ ಶ್ರೀಗಳಿಗೆ ಬಾಹ್ಯ ಬೆಂಬಲ ಚರ್ಚೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಜೋಶಿ, ಕಾಂಗ್ರೆಸ್ನವರು ತಮ್ಮ ಕ್ಯಾಂಡಿಡೇಟ್ ಹಾಕಿದ್ದಾರೆ. ಬಿಜೆಪಿ ನನ್ನನ್ನು ಅಖಾಡಕ್ಕೆ ಇಳಿಸಿದೆ, ಆದರೇ ಬಾಹ್ಯ ಬೆಂಬಲ ಅನ್ನೋ ಪದಕ್ಕೆ ನಾನು ಉತ್ತರ ಕೊಡಲ್ಲ. ಅವರು ನಮ್ಮ ಪಕ್ಷದವರು ಅಲ್ಲ ನನಗೂ ಸಂಬಂಧವಿಲ್ಲ, ಆದು ಆದಾಗ ನಾನು ವಿಚಾರ ಮಾಡಿ ಪ್ರತಿಕ್ರಿಯಿಸುತ್ತೇನೆ ಎಂದು ಪ್ರಹ್ಲಾದ್ ಜೋಶಿ ಹೇಳಿದರು.
ವಿನಯ್ ಕುಲಕರ್ಣಿ ಅವರಿಗೆ ಧಾರವಾಡ ಪ್ರವೇಶ ನಿರಾಕರಣೆ ಮಾಡಿದ್ದು ಸುಪ್ರೀಂ ಕೋರ್ಟ್, ವಿವಿಧ ಹಂತದ ನ್ಯಾಯಾಲಯದಲ್ಲಿ ಅವರ ಅರ್ಜಿ ವಜಾಗೊಂಡಿದೆ. ಸುಖಾಸುಮ್ಮನೆ ಆರೋಪ ಮಾಡುತ್ತಿದ್ದಾರೆ. ನಾನು ಯಾವುದೇ ಲಿಂಗಾಯತಗೆ ಅನ್ಯಾಯ ಮಾಡಿಲ್ಲ. ಧಾರವಾಡದ ಕ್ಷೇತ್ರದಲ್ಲಿ ನಾಲ್ಕು ಜನ ಲಿಂಗಾಯತ ಶಾಸಕರುಗಳಿದ್ದಾರೆ. ನಾವು ಹಿಂದುತ್ವದ ಮೇಲೆ ಗೆದ್ದೆ ಗೆಲ್ಲುತ್ತೇವೆ ಅಂತಾ ಕಾಂಗ್ರೆಸ್ ಗೆ ಗೊತ್ತಿದೆ. ಎಲ್ಲಾ ಜನಾಂಗದವರ ಬೆಂಬಲ ನಮಗಿದೆ ಎಂದು ಹೇಳಿದರು.