ಜೋಗಿ ಪ್ರೇಮ್ ಚಿತ್ರ ಕೆಡಿ ಟೀಸರ್ ರಿಲೀಸ್ ಅಕ್ಟೋಬರ್ ನಲ್ಲಿ ತೆರೆಗೆ 

Ravi Talawar
ಜೋಗಿ ಪ್ರೇಮ್ ಚಿತ್ರ ಕೆಡಿ ಟೀಸರ್ ರಿಲೀಸ್ ಅಕ್ಟೋಬರ್ ನಲ್ಲಿ ತೆರೆಗೆ 
WhatsApp Group Join Now
Telegram Group Join Now
 ಈ ವರ್ಷ ದೊಡ್ಡ ಮಟ್ಟದ ನಿರೀಕ್ಷೆಗಳನ್ನು ಹುಟ್ಟು ಹಾಕಿರುವ ಚಿತ್ರಗಳಲ್ಲಿ ‘ಕೆಡಿ’ ಮೊದಲ ಸಾಲಲ್ಲಿದೆ.  ಜೋಗಿ ಪ್ರೇಮ್ ನಿರ್ದೇಶನ ಹಾಗೂ ಆಕ್ಷನ್ ಪ್ರಿನ್ಸ್  ದ್ರುವ ಸರ್ಜಾ ಅಭಿನಯದ ಪ್ಯಾನ್ ಇಂಡಿಯಾ ಚಿತ್ರದ ಟೀಸರ್ ಬಿಡುಗಡೆಯಾಗಿದೆ.
      ಈಗಾಗಲೇ ಮುಂಬೈ, ಹೈದರಾಬಾದ್, ಚೆನ್ನೈ ಹಾಗೂ ಕೊಚ್ಚಿಯಲ್ಲಿ 4 ಭಾಷೆಗಳಲ್ಲಿ ಟೀಸರ್ ರಿಲೀಸ್ ಮಾಡಿದ್ದ ಚಿತ್ರತಂಡ ಬೆಂಗಳೂರಲ್ಲಿ ಕನ್ನಡ ಟೀಸರ್ ಗೆ ಚಾಲನೆ ನೀಡಿದೆ‌.  ಈ ಚಿತ್ರದಲ್ಲಿ ನಟಿಸಿರುವ ಬಾಲಿವುಡ್ ನಟ ಸಂಜಯ ದತ್, ಶಿಲ್ಪಾ ಶೆಟ್ಟಿ ಜೊತೆಗೆ ಕ್ರೇಜಿಸ್ಟಾರ್ ರವಿಚಂದ್ರನ್, ರಮೇಶ್ ಅರವಿಂದ್, ನಾಯಕಿ ರೀಶ್ಮಾ ನಾಣಯ್ಯ, ನಿರ್ಮಾಪಕ ಕೆ. ವೆಂಕಟ್ ನಾರಾಯಣ್,  ಆನಂದ್ ಆಡಿಯೋದ ಆನಂದ್ ಮುಂತಾದವರು ವೇದಿಕೆಯಲ್ಲಿ ಹಾಜರಿದ್ದರು.
      ದಕ್ಷಿಣ ಭಾರತದ ಹೆಸರಾಂತ ನಿರ್ಮಾಣ ಸಂಸ್ಥೆ ಕೆ.ವಿ.ಎನ್. ಪ್ರೊಡಕ್ಷನ್ಸ್ ಈ ಚಿತ್ರಕ್ಕೆ ದೊಡ್ಡ ಮಟ್ಟದಲ್ಲಿ ಬಂಡವಾಳ ಹೂಡಿಕೆ ಮಾಡಿದೆ. ನಿರ್ಮಾಪಕ ವೆಂಕಟ್ ನಾರಾಯಣ್ ಮಾತನಾಡುತ್ತಾ “ಕ್ಯಾರೆಕ್ಟರ್ ಇಂಟ್ರಡಕ್ಷನ್ ಟೀಸರ್‌ ಮೂಲಕ ಎಲ್ಲ ಪಾತ್ರಗಳನ್ನು ತೋರಿಸಿದ್ದೇವೆ. ಚಿತ್ರದಲ್ಲಿ ಆಕ್ಷನ್ ಜತೆಗೆ ಫ್ಯಾಮಿಲಿ ಎಮೋಷನ್ಸ್ ಎಲ್ಲವೂ ಇದೆ. ಧ್ರುವ, ರವಿಚಂದ್ರನ್, ಶಿಲ್ಪಾ ಶೆಟ್ಟಿ, ರೀಶ್ಮಾ ಎಲ್ಲರೂ ಈ ಥರದ ಪಾತ್ರಗಳನ್ನು ಹಿಂದೆ ಮಾಡಿಲ್ಲ. ಈ ಪಾತ್ರಗಳನ್ನು ಡಿಸೈನ್ ಮಾಡಲು ಪ್ರೇಮ್ 3 ವರ್ಷಗಳಿಂದ ತುಂಬಾ ಕಷ್ಟಪಟ್ಟಿದ್ದಾರೆ. ಎಲ್ಲ ಕಲಾವಿದ, ತಂತ್ರಜ್ಞರಿಗೂ ಧನ್ಯವಾದ.ಚಿತ್ರದಲ್ಲಿ ಎಲ್ಲರೂ ಮಚ್ಚು ಹಿಡಿದಿದ್ದಾರೆ. ಅವರು ಮಚ್ಚು ಹಿಡಿಯುವುದಕ್ಕೆ ಕಾರಣ ಸತ್ಯವತಿ. ಆಕೆಯಿಂದಲೇ ಧ್ರುವ, ರಮೇಶ್ ವೈಲೆಂಟ್ ಆಗಿ ಕಾಣಿಸ್ತಾರೆ. ಈಗಾಗಲೇ 2 ಸಾಂಗ್ ರಿಲೀಸಾಗಿದ್ದು.ಇನ್ನೂ 4 ಹಾಡು ಚಿತ್ರದಲ್ಲಿದೆ. ಈ ವರ್ಷದ ಅಕ್ಟೋಬರ್ ನಲ್ಲಿ ಕೆಡಿ ಪ್ರೇಕ್ಷಕರ ಮುಂದೆ ಬರಲಿದೆ” ಎಂದರು.
       ಬಾಲಿವುಡ್ ನಟ ಸಂಜಯ ದತ್  “ಕೆಡಿ’  ಚಿತ್ರದಲ್ಲಿ  ನನ್ನದು ಧಕ್ ದೇವಾ ಎಂಬ ಕಂಪ್ಲೀಟ್ಲಿ ಡೆಂಜರಸ್ ಕ್ಯಾರೆಕ್ಟರ್. ಭಯಾನಕ‌ ವಿಲನ್. ಅಲ್ಲದೆ  ಧ್ರುವ ಸರ್ಜಾ ಬರೀ ಕನ್ನಡದ  ನಟ ಅಲ್ಲ.ಆತ ಇಂಡಿಯನ್ ಆ್ಯಕ್ಟರ್” ಎಂದು ಧ್ರುವ ಸರ್ಜಾ ಅಭಿನಯವನ್ನು ಮನಸಾರೆ ಹೊಗಳಿದರು.
       ಶಿಲ್ಪಾ ಶೆಟ್ಟಿ “ಇದೇ ಮೊದಲ ಬಾರಿಗೆ ನಾನೀ ಚಿತ್ರದಲ್ಲಿ 70 ದಶಕದ ಮಹಿಳೆ ಸತ್ಯವತಿಯಾಗಿ ಕಾಣಿಸಿಕೊಂಡಿದ್ದೇನೆ. ಈ ಪಾತ್ರಕ್ಕಾಗಿ ಮೂರು ಸಲ ಬೆಂಗಳೂರಿಗೆ ಬಂದು ಹೋಗಿದ್ದೇನೆ” ಎಂದು ಹೇಳಿದರು.
      ನಟ ಧ್ರುವ ಸರ್ಜಾ “ಇಷ್ಟೂ ಜನ ಆಕ್ಟರ್ ಜತೆ ಕೆಲಸ ಮಾಡುವ ಅವಕಾಶ ಕೊಟ್ಟ ಕೆವಿಎನ್ ಸಂಸ್ಥೆಗೆ ಧನ್ಯವಾದ. ಸಂಜು ಬಾಬಾ, ಶಿಲ್ಪಾ  ಶೆಟ್ಟಿ ಅವರಿಂದ ತುಂಬಾ ಕಲಿತೆ. ನಮ್ಮ ಸಿನಿಮಾದ ನಿಜವಾದ ಹೀರೋ  ಅಂದ್ರೆ ನಿರ್ದೇಶಕ ಪ್ರೇಮ್, ಅವರದು ಒಂಥರಾ ಅತೃಪ್ತ ಆತ್ಮ, ಎಷ್ಟು ಕೆಲಸ ಮಾಡಿದರೂ ಅವರಿಗೆ ತೃಪ್ತಿ ಆಗಲ್ಲ‌‌” ಎಂದರು.
     ಪ್ರೇಮ್ ನಿರ್ದೇಶನದ ಚಿತ್ರಗಳಲ್ಲಿ ಹಾಡುಗಳಿಗೆ ದೊಡ್ಡಮಟ್ಟದ ಬಜೆಟ್ ಇರುತ್ತದೆ‌. ಅದೇರೀತಿ ಈ ಚಿತ್ರದಲ್ಲೂ ಅವರು ಸಂಗೀತಕ್ಕೆ ಕಥೆ, ಮೇಕಿಂಗ್ ನಷ್ಟೇ ಪ್ರಾಮುಖ್ಯತೆ ನೀಡಿದ್ದಾರೆ. ಶಿವ ಶಿವ ಹಾಡಲ್ಲಿ ಕಣ್ ಕೋರೈಸುವ ವಿಶ್ಯುಯೆಲ್ಸ್, ಅದ್ದೂರಿ ಮೇಕಿಂಗ್ ಯಾವುದೇ ಬಾಲಿವುಡ್ ಹಾಡಿಗೂ ಕಮ್ಮಿಯಿಲ್ಲ. ಈಗ ಅದಕ್ಕಿಂತ ಒಂದು ಪಾಲು ಹೆಚ್ಚೇ ಎನ್ನುವಂತೆ ಟೀಸರ್ ಮೂಡಿಬಂದಿದೆ.
      ನಿರ್ದೇಶಕ‌ ಪ್ರೇಮ್ “ಕೆವಿಎನ್ ಸಂಸ್ಥೆ ಚಿತ್ರದ ಅದ್ದೂರಿತನದ ವಿಷಯದಲ್ಲಿ ಯಾವುದಕ್ಕೂ ಕೊರತೆ ಮಾಡಿಲ್ಲ, ನಿರ್ಮಾಪಕರೇ ನಮ್ಮ ಚಿತ್ರದ ನಿಜವಾದ ಹೀರೋ. ಅವರಿಗೆ ನಮ್ಮ ಸಿನಿಮಾನ ಹೇಗೆ ತೆಗೆದುಕೊಂಡು ಹೋಗಬೇಕು ಎನ್ನುವ ಕನಸಿರಬೇಕು. ಅವರ ಸಿನಿಮಾ ಪ್ರೀತಿಗೆ ಧನ್ಯವಾದ. 1970-75ರ ಸಮಯದಲ್ಲಿ ನಡೆದ ನೈಜಘಟನೆ ಆಧಾರಿತ ಗ್ಯಾಂಗ್‌ಸ್ಟರ್ ಕಥೆ ಈ ಚಿತ್ರಲ್ಲಿದೆ, ಕೆಡಿ ಅಂದ್ರೆ ಕಾಳಿದಾಸ, ಈತ  ಎಷ್ಟು ಇನ್ನೋಸೆಂಟೋ, ಅಷ್ಟೇ ರಾ ಆಗಿರುತ್ತಾನೆ, ಇನ್ನು  1970ರ ದಶಕದಲ್ಲಿದ್ದ ಬೆಂಗಳೂರಿನ ಸೆಟ್ಟನ್ನು  ಮೋಹನ್ ಬಿ.ಕೆರೆ ಅವರು ರಿಯಲಿಸ್ಟಿಕ್  ಆಗಿ ಹಾಕಿದ್ದಾರೆ. ಅರ್ಜುನ್ ಜನ್ಯ ಅದ್ಭುತವಾದ  ಮ್ಯೂಸಿಕ್ ಮಾಡಿದ್ದಾರೆ. ಕನ್ನಡ ಚಿತ್ರರಂಗ ಈಗ ಟಾಪ್ ನಲ್ಲಿದೆ. ನಮ್ಮ‌ನಮ್ಮಲ್ಲೇ ಕಾಲೆಳೆಯುವುದನ್ನು  ಬಿಡಬೇಕು. ಚಿತ್ರಕ್ಕೆ ಒಟ್ಟು 160 ರಿಂದ 180 ದಿನಗಳವರೆಗೆ  ಶೂಟಿಂಗ್ ಮಾಡಿದ್ದೇವೆ” ಎಂದು  ಹೇಳಿದರು.
     ನಟಿ ರೀಶ್ಮಾ ನಾಣಯ್ಯ “ಈ ಚಿತ್ರದಲ್ಲಿ ನನಗೆ ಸಾಕಷ್ಟು ಕಲಿಯುವುದಿತ್ತು. ಪ್ರೇಮ್ ಸರ್, ನನಗೆ ಎರಡನೇಬಾರಿಗೆ ಅವಕಾಶ ಕೊಟ್ಟಿದ್ದಾರೆ.  ಫ್ಯಾಮಿಲಿ ಆಡಿಯನ್ಸ್ ಗೆ ತುಂಬಾ ಇಷ್ಟವಾಗುವಂಥ ಸಿನಿಮಾ”  ಎಂದು ಹೇಳಿದರು.
       ವಿಕ್ರಾಂತ್ ರೋಣ ಖ್ಯಾತಿಯ ವಿಲಿಯಂ ಡೇವಿಡ್ ಅವರ ಕ್ಯಾಮೆರಾ ವರ್ಕ್ ಚಿತ್ರಕ್ಕಿದೆ. ಸಂಜಯ್ ದತ್, ಶಿಲ್ಪಾ ಶೆಟ್ಟಿ  ಅಲ್ಲದೆ ನೋರಾ ಫತೇಹಿ ಸೇರಿದಂತೆ ಬಾಲಿವುಡ್‌ನ ಅನೇಕ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ.
WhatsApp Group Join Now
Telegram Group Join Now
Share This Article