ಕೋಟಾ, ರಾಜಸ್ಥಾನ: ದೇಶದ ಅತ್ಯಂತ ದೊಡ್ಡ ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಯಾಗಿರುವ ಜಾಯಿಂಟ್ ಎಂಟ್ರನ್ಸ್ ಎಕ್ಸಾಮ್ ಮೇನ್ ನ ಎರಡನೇ ಸೆಷನ್ ಏಪ್ರಿಲ್ 2 ರಂದು ಆರಂಭವಾಗಲಿದೆ. ಪರೀಕ್ಷೆಯ ಪ್ರವೇಶ ಪತ್ರಗಳನ್ನು ವಿದ್ಯಾರ್ಥಿಗಳಿಗೆ ಈಗಾಗಲೇ ನೀಡಲಾಗಿದೆ. ಪರೀಕ್ಷೆಗೆ ಮುನ್ನ, ಪರೀಕ್ಷೆಯ ವೇಳೆ ಮತ್ತು ನಂತರ ಪಾಲಿಸಬೇಕಾದ ನಿರ್ದೇಶನಗಳನ್ನು ಪ್ರವೇಶ ಪತ್ರಗಳಲ್ಲಿ ನೀಡಲಾಗಿದೆ. ಪರೀಕ್ಷಾರ್ಥಿಗಳ ಡ್ರೆಸ್ ಕೋಡ್ ಮತ್ತು ಸಂಪೂರ್ಣ ಪರೀಕ್ಷಾ ಮಾರ್ಗಸೂಚಿ ಕೂಡ ಬಿಡುಗಡೆ ಮಾಡಲಾಗಿದೆ.
ಕೋಟಾ ನಗರದಲ್ಲಿ ಒಟ್ಟು ನಾಲ್ಕು ಪರೀಕ್ಷಾ ಕೇಂದ್ರಗಳಿವೆ. ರಾಣ್‌ಪುರ, ಗೋಬರಿಯಾ ಬಾವಡಿ, ವಿಶ್ವಕರ್ಮ ಸರ್ಕಲ್ ಹತ್ತಿರ ಮತ್ತು ಇಂದ್ರಪ್ರಸ್ಥ ಕೈಗಾರಿಕಾ ಪ್ರದೇಶದಲ್ಲಿ ಈ ಕೇಂದ್ರಗಳಿವೆ.
ಈ ಬಗ್ಗೆ ಮಾತನಾಡಿದ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯ ರಾಜಸ್ಥಾನದ ಸಂಯೋಜಕ ಇಂಜಿನಿಯರ್ ಡಾ. ಪ್ರದೀಪ್ ಸಿಂಗ್ ಗೌಡ, ಪರೀಕ್ಷೆಗಳು ಬೆಳಗಿನ ಅವಧಿಯಲ್ಲಿ 9 ರಿಂದ 12 ರವರೆಗೆ ಮತ್ತು ಮಧ್ಯಾಹ್ನದ ಅವಧಿಯಲ್ಲಿ 3 ರಿಂದ 6ರ ಮಧ್ಯೆ ನಡೆಯಲಿವೆ ಎಂದು ತಿಳಿಸಿದರು. ಬೆಳಗಿನ ಅವಧಿಯ ಪರೀಕ್ಷೆಯಲ್ಲಿ 7 ಗಂಟೆಗೆ ಅಭ್ಯರ್ಥಿಗಳಿಗೆ ಪ್ರವೇಶ ನೀಡಲಾಗುತ್ತದೆ ಮತ್ತು 8:30ಕ್ಕೆ ಪ್ರವೇಶ ಬಂದ್ ಮಾಡಲಾಗುತ್ತದೆ. ಸಂಜೆ ಅವಧಿಯಲ್ಲಿ ಮಧ್ಯಾಹ್ನ 1 ಗಂಟೆ ನಂತರ ಪ್ರವೇಶ ನೀಡಲಾಗುವುದು ಮತ್ತು 2:30ಕ್ಕೆ ಪ್ರವೇಶ ಬಂದ್ ಮಾಡಲಾಗುವುದು.
ಹಲವು ನಿರ್ಬಂಧಗಳನ್ನು ವಿಧಿಸಿರುವ ಎನ್ಟಿಎ: ಪರೀಕ್ಷೆಯನ್ನು ಗಮನದಲ್ಲಿಟ್ಟು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಹಲವು ನಿರ್ಬಂಧಗಳನ್ನು ವಿಧಿಸಿದೆ. ಅಲ್ಲದೇ ಪರೀಕ್ಷಾ ಕೇಂದ್ರದೊಳಗೆ ಕೆಲ ವಸ್ತುಗಳನ್ನು ತರದಂತೆ ನಿಷೇಧಿಸಿದೆ. ಪರೀಕ್ಷಾರ್ಥಿಗಳು ನಾಲ್ಕು ಪುಟಗಳ ಪ್ರವೇಶ ಪತ್ರ ಮತ್ತು ಅದರಲ್ಲಿ ನೀಡಿರುವ ನಿರ್ದೇಶನಗಳನ್ನು ಸರಿಯಾಗಿ ಓದಿ ಪಾಲನೆ ಮಾಡುವುದು ಅಗತ್ಯವಾಗಿದೆ.
ಈ ಬಗ್ಗೆ ಮಾತನಾಡಿದ ಶಿಕ್ಷಣ ತಜ್ಞ ದೇವ್ ಶರ್ಮಾ, ಪರೀಕ್ಷಾ ಕೇಂದ್ರದಲ್ಲಿ ಪ್ರವೇಶಕ್ಕೆ ನೀಡಲಾಗಿರುವ ಮಾರ್ಗಸೂಚಿಗಳ ಪ್ರಕಾರ ಅಭ್ಯರ್ಥಿಯು ಪರೀಕ್ಷೆಯ ದಿನ ಆನ್‌ಲೈನ್ ಆಪ್ಲಿಕೇಶನ್ ಫಾರ್ಮ್‌ನಲ್ಲಿ ಅಪ್ ಲೋಡ್ ಮಾಡಿರುವ ಫೋಟೋ ಐಡಿ ಕಾರ್ಡ್ ಕೊಂಡೊಯ್ಯುವುದು ಕಡ್ಡಾಯ ಎಂದು ಹೇಳಿದರು. ಆಧಾರ್ ಕಾರ್ಡ್ ಇಲ್ಲದ ಅಭ್ಯರ್ಥಿಗಳು ಘೋಷಣಾ ಫಾರ್ಮ್ ತುಂಬಿಕೊಂಡು ಕೊಂಡೊಯ್ಯಬೇಕು. ಪ್ರವೇಶ ಪತ್ರದೊಂದಿಗೆ ಇದನ್ನು ನೀಡಲಾಗಿದೆ. ಪರೀಕ್ಷೆ ಸಂಪೂರ್ಣವಾದ ಬಳಿಕ ಬಳಸಿದ ಕಚ್ಚಾ ಕಾಗದಗಳು ಮತ್ತು ಪ್ರವೇಶ ಪತ್ರಗಳನ್ನು ಡ್ರಾಪ್ ಬಾಕ್ಸ್‌ನಲ್ಲಿ ಹಾಕಬೇಕಾಗುತ್ತದೆ. ಹೀಗೆ ಮಾಡದ ಅಭ್ಯರ್ಥಿಗಳ OMR ಶೀಟ್ ಮೌಲ್ಯಮಾಪನ ಮಾಡಲಾಗುವುದಿಲ್ಲ.