ಬೆಂಗಳೂರು,14: ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೆನ್ಡ್ರೈವ್ ಲೀಕ್ ಮಾಡಿದ್ದು ಅರಕಲಗೂಡು ಜೆಡಿಎಸ್ ಶಾಸಕ ಎ.ಮಂಜು ಎಂದು ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದ ಕಾಂಗ್ರೆಸ್ ಕಾರ್ಯಕರ್ತ ನವೀನ್ ಗೌಡ ವಿರುದ್ಧ ಎಸ್ಐಟಿಗೆ ದೂರು ನೀಡಲಾಗಿದೆ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಶಾಸಕ ಎ. ಮಂಜು ದೂರು ದಾಲಿಸಿದ್ದಾರೆ. ಸೋಮವಾರ ಎಸ್.ಐ.ಟಿ ಕಚೇರಿಗೆ ಆಗಮಿಸಿದ ಅರಕಲಗೂಡು ಜೆಡಿಎಸ್ ಶಾಸಕ ಎ. ಮಂಜು, ನವೀನ್ ಗೌಡ ವಿರುದ್ಧ ದೂರು ನೀಡಿದ್ದಾರೆ. ಪೆನ್ ಡ್ರೈವ್ ಅನ್ನು ಶಾಸಕ ಎ. ಮಂಜು ಅವರಿಗೆ ಕೊಟ್ಟಿದ್ದಾಗಿ ಭಾನುವಾರ ನವೀನ್ ಗೌಡ ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿದ್ದ. ಈ ಆರೋಪಕ್ಕೆ ಸಿಟ್ಟಾಗಿರುವ ಮಂಜು ಈಗ ದೂರು ನೀಡಿದ್ದಾರೆ.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನವೀನ್ ಗೌಡನಿಗೆ ಏಪ್ರಿಲ್ 20ರಂದು ಅಶ್ಲೀಲ ವಿಡಿಯೊದ ಪೆನ್ಡ್ರೈವ್ ಸಿಗುತ್ತದೆ. ಅದನ್ನು ಏಪ್ರಿಲ್ 21ರಂದು ನನಗೆ ಕೊಟ್ಟಿದ್ದೇನೆ ಎಂದು ಹೇಳಿದ್ದಾರೆ. ನನಗೆ ಪೆನ್ ಡ್ರೈವ್ ಅನ್ನು ಯಾಕೆ ಕೊಡಬೇಕು ಎಂಬುದನ್ನು ಮನಸ್ಸು ಮುಟ್ಟಿ ಹೇಳಿಕೊಳ್ಳಲಿ. ನವೀನ್ ಗೌಡ ನನಗೆ ಪರಿಚಯವೇ ಇಲ್ಲ. ನವೀನ್ ಗೌಡ ತಪ್ಪಿಸಿಕೊಳ್ಳಲು ಹಾಗೂ ಎಸ್ಐಟಿ ತನಿಖೆಯ ದಿಕ್ಕು ತಪ್ಪಿಸಲು ಈ ಹೇಳಿಕೆ ಕೊಟ್ಟಿದ್ದಾರೆ.
ಸತ್ಯ ಹೊರಬರಬೇಕೆಂದು ನಾನು ಬಯಸುತ್ತೇನೆ. ಈಗ ನನ್ನನ್ನು ಏಕೆ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ನನಗೆ ತಿಳಿದಿಲ್ಲ. ಪೆನ್ ಡ್ರೈವ್ಗಳ ಸೋರಿಕೆ ಮಾಡುವುದರ ಹಿಂದೆ ನನ್ನ ಕೈವಾಡವಿದೆ ಎಂದು ಜನರು ಭಾವಿಸಬಾರದು ಎಂಬ ಉದ್ದೇಶದಿಂದ ನಾನು ದೂರು ದಾಖಲಿಸಿದ್ದೇನೆ. ಇದು ನನ್ನ ಮತ್ತು ಜೆಡಿಎಸ್ ನಾಯಕ ಎಚ್ಡಿ ದೇವೇಗೌಡರ ನಡುವೆ ಬಿರುಕು ಮೂಡಿಸುವ ಪ್ರಯತ್ನವಾಗಿರಬಹುದು ಎಂದು ಮಂಜು ತಿಳಿಸಿದರು.