ಅಮರಾವತಿ, ಜೂ.15: ಆಂಧ್ರಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ನಾಯಕತ್ವದಲ್ಲಿ ಸರ್ಕಾರ ರಚನೆ ಆಗಿದೆ. ಈಗಾಗಲೇ ಸರ್ಕಾರದ ನೂತನ ಸಚಿವರಿಗೆ ಖಾತೆಯನ್ನು ಹಂಚಿಕೆ ಮಾಡಲಾಗಿದೆ, ಚಂದ್ರಬಾಬು ನಾಯ್ಡು ಸರ್ಕಾರಕ್ಕೆ ಬೆಂಬಲ ನೀಡಿದ ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಅವರು ಆಂಧ್ರದ ಉಪಮುಖ್ಯಮಂತ್ರಿಯಾಗಿ ನೇಮಕಾಗೊಂಡಿದ್ದಾರೆ. ಇದರ ಜತೆಗೆ ಪಂಚಾಯತ್ ರಾಜ್, ಗ್ರಾಮೀಣಾಭಿವೃದ್ಧಿ ಮತ್ತು ಗ್ರಾಮೀಣ ನೀರು ಸರಬರಾಜು ಖಾತೆಗಳೊಂದಿಗೆ ಪರಿಸರ ಮತ್ತು ಅರಣ್ಯ, ವಿಜ್ಞಾನ ಮತ್ತು ತಂತ್ರಜ್ಞಾನದೊಂದಿಗೆ ಹೆಚ್ಚುವರಿ ಸ್ಥಾನವನ್ನು ನೀಡಲಾಗಿದೆ.
ಚಂದ್ರಬಾಬು ನಾಯ್ಡು ಸರ್ಕಾರ ಶುಕ್ರವಾರ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ. ಇದರಲ್ಲಿ ಪವನ್ ಕಲ್ಯಾಣ್ ಕೂಡ ಒಬ್ಬರು. ಪವನ್ ಮೊದಲ ಬಾರಿಗೆ ಪಿಠಾಪುರಂದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. 2014 ಮತ್ತು 2019 ರ ನಡುವೆ ಟಿಡಿಪಿ ಸರ್ಕಾರದಲ್ಲಿ ಸಚಿವರಾಗಿದ್ದ ನಾರಾಯಣ ಗ್ರೂಪ್ ಆಫ್ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಡಾ ಪಿ ನಾರಾಯಣ ಅವರಿಗೆ ಮತ್ತೆ ನಗರಾಭಿವೃದ್ಧಿ, ಪೌರಾಡಳಿತ ಖಾತೆಗಳನ್ನು ನೀಡಲಾಗಿದೆ.
ಟಿಡಿಪಿ ರಾಜ್ಯಾಧ್ಯಕ್ಷ ಕೆ ಅಚ್ಚೆನಾಯ್ಡು ಅವರಿಗೆ ಕೃಷಿ, ಸಹಕಾರ ಮತ್ತು ಮಾರುಕಟ್ಟೆ, ಹಾಗೂ ಪಶುಸಂಗೋಪನೆ, ಡೈರಿ ಮತ್ತು ಮೀನುಗಾರಿಕೆ ನೀಡಲಾಗಿದೆ. ಇವರು ಕೂಡ ಈ ಹಿಂದೆ ಚಂದ್ರಬಾಬು ನಾಯ್ಡು ಸರ್ಕಾರದಲ್ಲಿ ಸಚಿವರಾಗಿದ್ದರು. ಟಿಡಿಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ನಾಯ್ಡು ಅವರ ಪುತ್ರ ಲೋಕೇಶ್ ಅವರನ್ನು ಎಚ್ಆರ್ಡಿ, ಐಟಿ, ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಸಚಿವರಾಗಿ ನೇಮಕಾ ಮಾಡಲಾಗಿದೆ.
ಇನ್ನು ಚಂದ್ರಬಾಬು ನಾಯ್ಡು ಅವರ ಸರ್ಕಾರಕ್ಕೆ ಬೆಂಬಲ ನೀಡಿರುವ ಬಿಜೆಪಿಯ ಸತ್ಯ ಕುಮಾರ್ ಯಾದವ್ ಅವರಿಗೆ ವೈದ್ಯಕೀಯ, ಆರೋಗ್ಯ, ಕುಟುಂಬ ಕಲ್ಯಾಣ ಖಾತೆಯನ್ನು ನೀಡಲಾಗಿದೆ. ಟಿಡಿಪಿ ನಾಯಕಿ ವಿ ಅನಿತಾ ರಾಜ್ಯದ ಗೃಹ ಸಚಿವರಾಗಲಿದ್ದಾರೆ.