ಜಮ್ಮುಕಾಶ್ಮೀರ, ಮಹಾರಾಷ್ಟ್ರ, ಹರಿಯಾಣ ವಿಧಾನಸಭೆ ಚುನಾವಣೆ ವೇಳಾಪಟ್ಟಿ ಪ್ರಕಟ ಸಾಧ್ಯತೆ!

Ravi Talawar
ಜಮ್ಮುಕಾಶ್ಮೀರ, ಮಹಾರಾಷ್ಟ್ರ, ಹರಿಯಾಣ ವಿಧಾನಸಭೆ ಚುನಾವಣೆ ವೇಳಾಪಟ್ಟಿ ಪ್ರಕಟ ಸಾಧ್ಯತೆ!
WhatsApp Group Join Now
Telegram Group Join Now

ನವದೆಹಲಿ: ಕೇಂದ್ರ ಚುನಾವಣಾ ಆಯೋಗವು ಇಂದು ಮಧ್ಯಾಹ್ನ ಮಹತ್ವದ ಸುದ್ದಿಗೋಷ್ಠಿ ನಡೆಸಲಿದ್ದು, ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸುವ ಸಾಧ್ಯತೆಗಳಿವೆ. ಆಯೋಗವು ಮಧ್ಯಾಹ್ನ 3 ಗಂಟೆಗೆ ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ನಡೆಸಲಿದೆ ಎಂದು ಮಾಧ್ಯಮಗಳಿಗೆ ತನ್ನ ಆಹ್ವಾನದಲ್ಲಿ ತಿಳಿಸಿದೆ. ಜಮ್ಮು ಮತ್ತು ಕಾಶ್ಮೀರ ಮತ್ತು ಹರಿಯಾಣಕ್ಕೆ ಚುನಾವಣಾ ವೇಳಾಪಟ್ಟಿ ಪ್ರಕಟಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಹರಿಯಾಣ ಮತ್ತು ಮಹಾರಾಷ್ಟ್ರದ ಶಾಸಕಾಂಗ ಸಭೆಗಳ ಅವಧಿಯು ಕ್ರಮವಾಗಿ ನವೆಂಬರ್ 3 ಮತ್ತು ನವೆಂಬರ್ 26ರಂದು ಕೊನೆಗೊಳ್ಳಲಿದೆ. ಜೊತೆಗೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಸಪ್ಟೆಂಬರ್​ 30ರೊಳಗೆ ವಿಧಾನಸಭಾ ಚುನಾವಣೆಯನ್ನು ನಡೆಸುವಂತೆ ಸುಪ್ರೀಂ ಕೋರ್ಟ್ ಗಡುವು ನೀಡಿದೆ. ಅದರಂತೆ ಸೆಪ್ಟೆಂಬರ್ 30ರೊಳಗೆ ಚುನಾವಣೆ ನಡೆಸಲು ಚುನಾವಣಾ ಸಮಿತಿ ನಿರ್ಧರಿಸಿದೆ.

ಭಾರತದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್, ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ಹಾಗೂ ಎಸ್ಎಸ್ ಸಂಧು ಅವರು ಶ್ರೀನಗರ ಮತ್ತು ಜಮ್ಮುವಿನಲ್ಲಿ ರಾಜಕೀಯ ಪಕ್ಷಗಳು, ಉಪ ಆಯುಕ್ತರು ಮತ್ತು ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಯುತ್ತಿದೆ.

ಚುನಾವಣಾ ಆಯೋಗವು ಬುಧವಾರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಅವರೊಂದಿಗೆ ಸಭೆ ನಡೆಸಿತ್ತು. ಅಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಮತ್ತು ಚುನಾವಣೆಯ ಸಮಯದಲ್ಲಿ ಸಾಕಷ್ಟು ಭದ್ರತೆ ಒದಗಿಸಲು ಕೋರಿದೆ. ಅಭ್ಯರ್ಥಿಗಳ ಭದ್ರತೆಗಾಗಿ ಸುಮಾರು 15,000ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲು ಕೋರಲಾಗಿದೆ.

ಚುನಾವಣಾ ಸಿದ್ಧತೆಯ ಬಗ್ಗೆ ಮೇಲ್ವಿಚಾರಣೆ ಮಾಡಲು ಚುನಾವಣಾ ಆಯೋಗವು ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರ ಮತ್ತು ಹರಿಯಾಣಕ್ಕೆ ಭೇಟಿ ನೀಡಿತ್ತು. ಆದರೆ, ಇನ್ನೂ ಮಹಾರಾಷ್ಟ್ರಕ್ಕೆ ಭೇಟಿ ನೀಡಿಲ್ಲ. ಹಾಗಾಗಿ, ಯಾವ ಯಾವ ರಾಜ್ಯಗಳ ವಿಧಾನಸಭಾ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಬಹುದು ಎನ್ನುವುದರ ಬಗ್ಗೆ ಕುತೂಹಲ ಇದೆ.

 

WhatsApp Group Join Now
Telegram Group Join Now
Share This Article