ಪ್ರಾಮಾಣಿಕ, ನಿಷ್ಕಲ್ಮಷ ಮನಸ್ಸಿನ ರಕ್ಷಾ ರಾಮಯ್ಯ ಅವರನ್ನು ಗೆಲ್ಲಿಸುವುದು ಪ್ರತಿಯೊಬ್ಬ ಕಾಂಗ್ರೆಸ್ಸಿಗರ ಗುರಿ – ಸಹಕಾರ ಸಚಿವ ಕೆ.ಎನ್. ರಾಜಣ್ಣ

Hasiru Kranti
ಪ್ರಾಮಾಣಿಕ, ನಿಷ್ಕಲ್ಮಷ ಮನಸ್ಸಿನ ರಕ್ಷಾ ರಾಮಯ್ಯ ಅವರನ್ನು ಗೆಲ್ಲಿಸುವುದು ಪ್ರತಿಯೊಬ್ಬ ಕಾಂಗ್ರೆಸ್ಸಿಗರ ಗುರಿ – ಸಹಕಾರ ಸಚಿವ ಕೆ.ಎನ್. ರಾಜಣ್ಣ
WhatsApp Group Join Now
Telegram Group Join Now

* ಚಿಕ್ಕಬಳ್ಳಾಪುರದಲ್ಲಿ ಸಹಕಾರ ಸಂಘಗಳ ಅಧ್ಯಕ್ಷರು, ನಿರ್ದೇಶಕರು, ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ಬೃಹತ್ ಚುನಾವಣಾ ಪ್ರಚಾರ ಸಭೆ

* ನನ್ನ ಎದೆ ಸೀಳಿದರೆ ಶ್ರೀರಾಮ, ಸಿದ್ದರಾಮಯ್ಯ ಇಬ್ಬರೂ ಇದ್ದಾರೆ. ನಮ್ಮ ಜೊತೆ ಸಾಕ್ಷತ್ ರಕ್ಷಾ ರಾಮಯ್ಯ ಇದ್ದಾರೆ – ಶಾಸಕ ಪ್ರದೀಪ್ ಈಶ್ವರ್

 

ಚಿಕ್ಕಬಳ್ಳಾಪುರ, ಏ, 13; ನಮ್ಮದು ನುಡಿದಂತೆ ನಡೆದ ಸರ್ಕಾರವಾಗಿದ್ದು, ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಪ್ರಾಮಾಣಿಕ, ನಿಷ್ಕಲ್ಮಷ ಮನಸ್ಸಿನವರು. ಅವರನ್ನು ಗೆಲ್ಲಿಸುವುದು ಪ್ರತಿಯೊಬ್ಬ ಕಾಂಗ್ರೆಸ್ಸಿಗರ ಗುರಿಯಾಗಬೇಕು ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಕರೆ ನೀಡಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಸಹಕಾರ ಸಂಘಗಳ ಅಧ್ಯಕ್ಷರು, ನಿರ್ದೇಶಕರು, ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ಚುನಾವಣಾ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ವಿಧಾನಪರಿಷತ್ ಸದಸ್ಯರಾದ ಎಂ.ಆರ್. ಸೀತಾರಾಂ ಅವರ ನೇತೃತ್ವದಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗಿತ್ತು. ಶಾಸಕರಾದ ಪ್ರದೀಪ್ ಈಶ್ವರ್, ಕೆ.ಎಚ್. ಪುಟ್ಟಸ್ವಾಮಿ ಗೌಡ, ಮಾಜಿ ಶಾಸಕರಾದ ಪೂರ್ಣಿಮಾ ಶ್ರೀನಿವಾಸ್, ಎನ್. ಸಂಪಂಗಿ, ಕೆ.ಪಿ. ಬಚ್ಚೇಗೌಡ, ವಿಧಾನಪರಿಷತ್ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್, ಪಕ್ಷದ ಧುರೀಣರಾದ ಯಳುವಳ್ಳಿ ರಮೇಶ್, ಆಂಜಿನಪ್ಪ ಮತ್ತಿತರ ಗಣ್ಯರ ಸಮ್ಮುಖದಲ್ಲಿ ಬಿಜೆಪಿ ಅಭ್ಯರ್ಥಿ ಸುಧಾಕರ್ ವಿರುದ್ಧ ರಣಕಹಳೆ ಮೊಳಗಿಸಲಾಯಿತು.

ಸಚಿವ ಕೆ.ಎನ್ ರಾಜಣ್ಣ ಮಾತನಾಡಿ, ಚುನಾವಣೆಯಲ್ಲಿ ರಕ್ಷಾ ರಾಮಯ್ಯ ಅವರಿಗೆ ಆಶಿರ್ವಾದ ಮಾಡಿ. ಅವರು ಯುವ ಸಮೂಹದ ಕಣ್ಮಣಿ. ಗೌರವಯುತ ಕುಟುಂಬದವರು. ಅವರು ಸುಳ್ಳು ಹೇಳುವುದಿಲ್ಲ. ಕೆಲಸ ಮಾಡುವ ಅಪಾರ ಕಳಕಳಿ ಹೊಂದಿದ್ದು, ಇಂತಹ ಯುವಕರು ಆರಿಸಿ ಬಂದರೆ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಹೆಚ್ಚಿನ ರೀತಿಯಲ್ಲಿ ಅನುಕೂಲವಾಗಲಿದೆ ಎಂದು ಹೇಳಿದರು.

ನಮ್ಮ ಕುಟುಂಬದ ಹೆಣ್ಣುಮಕ್ಕಳನ್ನು ಮದುವೆ ಮಾಡಿಕೊಡುವಾಗ ಏನೆಲ್ಲಾ ಗುಣಗಳನ್ನು ನೋಡುತ್ತೇವೆಯೋ ಅವೆಲ್ಲ ಲಕ್ಷಣಗಳು ರಕ್ಷಾ ರಾಮಯ್ಯ ಅವರಲ್ಲಿದೆ. ತೇಜೋವಧೆ ಮಾಡುವ ಪ್ರವೃತ್ತಿ ಅವರಲ್ಲಿಲ್ಲ. ಕಷ್ಟಕ್ಕೆ ಮಿಡಿಯುವ ವ್ಯಕ್ತಿ ರಕ್ಷಾ ರಾಮಯ್ಯ. ಇದು ಲೋಕಸಭಾ ಚುನಾವಣೆಯಾಗಿದ್ದು, ಎಷ್ಟೋ ಹಳ್ಳಿಗಳಿಗೆ ನಾವು ಭೇಟಿ ನೀಡಲು ಸಾಧ್ಯವಾಗುವುದಿಲ್ಲ. ಹಾಗೆಂದು ನಮ್ಮನ್ನು ಭೇಟಿ ಮಾಡಿಲ್ಲ. ನಮ್ಮ ಊರಿಗೆ ಬಂದಿಲ್ಲ ಎಂದು ಹೇಳುವುದು ಸರಿಯಲ್ಲ. ಪ್ರತಿಯೊಬ್ಬ ಕಾರ್ಯಕರ್ತರು, ಮುಖಂಡರು ಪಕ್ಷದ ಪರವಾಗಿ ಪ್ರಚಾರ ಮಾಡಬೇಕು ಎಂದು ಹೇಳಿದರು.

ಕಳೆದ ವಿಧಾನಸಭಾ ಚುನಾವಣೆ ಪ್ರಚಾರ ಸಂದರ್ಭದಲ್ಲಿ ನಾವು ಗ್ಯಾರೆಂಟಿ ಯೋಜನೆಗಳ ಬಗ್ಗೆ ಪ್ರಸ್ತಾಪಿಸಿದಾಗ ಜನ ನಂಬುತ್ತಿರಲಿಲ್ಲ. ಜೆ.ಡಿ.ಎಸ್ ಮತ್ತು ಬಿಜೆಪಿಯವರು ಸರ್ಕಾರ ದಿವಾಳಿಯಾಗುತ್ತದೆ ಎಂದು ಟೀಕಿಸಿದ್ದರು. ಇದೀಗ ಗ್ಯಾರೆಂಟಿ ಯೋಜನೆಗಳನ್ನು ಜಾರಿಮಾಡಿದ್ದು, ವಿಶೇಷವಾಗಿ ಬಡಕುಟುಂಬದ ಹೆಣ್ಣು ಮಕ್ಕಳು ಕಾಂಗ್ರೆಸ್ ಪಕ್ಷಕ್ಕೆ ಹರಸಿ, ಆಶೀರ್ವದಿಸುತ್ತಿದ್ದಾರೆ ಎಂದರು.

ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಸಹ ತಮ್ಮ ತತ್ವ, ಸಿದ್ಧಾಂತಗಳನ್ನೇ ಬದಲಿಸಿಕೊಂಡಿದ್ದಾರೆ. ಇದೀಗ ಮೋದಿ ಜಪ ಮಾಡುತ್ತಿದ್ದಾರೆ. ಮುಂದಿನ ಜನ್ಮದಲ್ಲಿ ಮುಸ್ಲೀಂ ಆಗಿ ಹುಟ್ಟುತ್ತೇನೆ. ಮೋದಿ ಪ್ರಧಾನಿಯಾದರೆ ದೇಶ ತೊರೆಯುತ್ತೇನೆ ಎಂದು ದೇವೇಗೌಡರು ಹೇಳಿದ್ದರು. ನಮ್ಮ ಪಕ್ಷ ಕುಮಾರ ಸ್ವಾಮಿ ಅವರನ್ನು ಮುಖ್ಯಮಂತ್ರಿ, ದೇವೇಗೌಡರನ್ನು ಪ್ರಧಾನಿ ಮಾಡಿತ್ತು. ಮೋದಿ ಪ್ರತಿವರ್ಷ ಎರಡು ಕೋಟಿ ಉದ್ಯೋಗ ನೀಡುವುದಾಗಿ ಹೇಳಿದ್ದರು. ಹೊರ ದೇಶದಲ್ಲಿರುವ ಕಪ್ಪು ಹಣ ತಂದು ಬಡಜನರಿಗೆ ಹಂಚುವುದಾಗಿ ಹೇಳಿದ್ದರು. ಯಾವೊಂದು ಭರವಸೆಗಳು ಈಡೇರಿಲ್ಲ. ನಮ್ಮ ಸರ್ಕಾರ ಜಾರಿಗೆ ಬಂದ ಅಲ್ಪ ಸಮಯದಲ್ಲಿ ಪ್ರತಿಯೊಂದು ಭರವಸೆಗಳನ್ನು ಈಡೇರಿಸಿದ್ದೇವೆ ಎಂದರು.

ಕಾಂಗ್ರೆಸ್ ಎಲ್ಲಾ ಸಮುದಾಯಗಳಿಗೆ ಆದ್ಯತೆ ನೀಡುತ್ತಿದೆ. ಕಟ್ಟಕಡೆಯ ವ್ಯಕ್ತಿಗೂ ಅಧಿಕಾರ ನೀಡುತ್ತಿದೆ. ದೇಶ ಕಟ್ಟುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಹಸಿದವರಿಗೆ ಮಾತ್ರ ಅನ್ನದ ಮಹತ್ವ ತಿಳಿಯುತ್ತದೆ. ನಮ್ಮ ಸರ್ಕಾರ ಜನಪರ ಆಡಳಿತ ನೀಡುತ್ತಿದ್ದು, ಪ್ರತಿ ತಿಂಗಳು ರಾಜ್ಯದ ಬಹುತೇಕ ಕುಟುಂಬಗಳಿಗೆ ಸರಿ ಸುಮಾರು ಐದು ಸಾವಿರ ರೂಪಾಯಿಗೂ ಅಧಿಕ ಮೊತ್ತದ ಸೌಲಭ್ಯಗಳು ದೊರೆಯುತ್ತಿವೆ ಎಂದು ಸಚಿವ ಕೆ.ಎನ್.ರಾಜಣ್ಣ ಹೇಳಿದರು.

ನಾನು ಶಾಸಕನಾಗಲು ಎಂ.ಎಸ್. ರಾಮಯ್ಯ ಅವರ ಪುತ್ರರಾದ ಎಂ.ಆರ್. ಜಯರಾಂ ಮತ್ತು ಎಂ.ಆರ್. ಸೀತಾರಾಂ ಅವರು ಅವರ ಕೊಡುಗೆಯೂ ಇದೆ. ತಮ್ಮ ಮಧುಗಿರಿ ಕ್ಷೇತ್ರದಲ್ಲಿ ಎರಡು ಕೋಟಿ ರೂಪಾಯಿಗೂ ಅಧಿಕ ಮೊತ್ತದಲ್ಲಿ ಅವರು ಸಮುದಾಯದ ಭವನ ನಿರ್ಮಿಸಿಕೊಟ್ಟಿದ್ದಾರೆ. ಅವರ ಪ್ರೀತಿ, ವಿಶ್ವಾಸ ನಮ್ಮ ಕ್ಷೇತ್ರದಾದ್ಯಂತ ಹರಡಿಕೊಂಡಿದೆ. ನಾನೂ ಕೂಡ ಎಂ.ಎಸ್. ರಾಮಯ್ಯ ಅವರ ಕುಟುಂಬದ ಸದಸ್ಯ ಎಂದು ಹೆಮ್ಮೆಯಿಂದ ಹೇಳುತ್ತೇನೆ. ಸುಳ್ಳು ಹೇಳಬಾರದು, ಸತ್ಯ ನುಡಿಯಬೇಕು. ನಾವು ಎಲ್ಲಾ ದೇವರ ಭಕ್ತರು. ಆದರೆ ಕೆಲವರು ಶ್ರೀರಾಮನ ಹೆಸರಿನಲ್ಲಿ ಮತಯಾಚಿಸುವ ಪಾಪದ ಕೆಲಸ ಮಾಡುತ್ತಿದ್ದಾರೆ ಎಂದರು.

ನಾವು ದೇಶಕ್ಕೆ ಅತಿ ಹೆಚ್ಚು ತೆರಿಗೆ ಕೊಡುವವರು. ಆದರೆ ನಮಗೆ ಕೇಂದ್ರ ಸರ್ಕಾರ ಬರಪರಿಹಾರಕ್ಕೆ ಹಣ ಕೊಡುತ್ತಿಲ್ಲ. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿಸಲ್ಲಿಸಿದಾಗ ನಮಗೆ ನೋಟೀಸ್ ನೀಡಬೇಡಿ, ಎರಡು ವಾರಗಳಲ್ಲಿ ಪರಿಹಾರ ನೀಡುತ್ತೇವೆ ಎಂದು ಕೇಂದ್ರ ಸರ್ಕಾರ ನ್ಯಾಯಾಲಯದಲ್ಲಿ ಹೇಳುತ್ತಿದೆ ಎಂದರು.

ಶಾಸಕರಾದ ಪ್ರದೀಪ್ ಈಶ್ವರ್ ಮಾತನಾಡಿ, ಈ ದೇಶದಲ್ಲಿ ಸಾಮಾಜಿಕ ನ್ಯಾಯಕ್ಕೆ ಮತ್ತೊಂದು ಹೆಸರು ಕಾಂಗ್ರೆಸ್. ಈ ದೇಶದಲ್ಲಿ ಎಲ್ಲವನ್ನೂ ನಿರ್ಮಿಸಿದ್ದು ಕಾಂಗ್ರೆಸ್. ಪಾಯ ಹಾಕಿ, ಕಟ್ಟಡ ಕಟ್ಟಿದ್ದು ನಾವು. ಬಿಜೆಪಿಯವರು ಕೇವಲ ಫಾಲ್ ಸೀಲಿಂಗ್ ಮಾಡಿದ್ದಾರೆ. ನಾವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಲ್ಲಿ ಪ್ರತಿಯೊಂದು ಕುಟುಂಬಕ್ಕೆ ವರ್ಷಕ್ಕೆ ಒಂದು ಲಕ್ಷ ರೂಪಾಯಿ ದೊರೆಯಲಿದೆ. ಎಸ್.ಸಿ, ಎಸ್.ಟಿ. ಒಬಿಸಿ ಮೀಸಲಾತಿ ಪ್ರಮಾಣವನ್ನು ಶೇ 50ಕ್ಕೆ ಏರಿಕೆ ಮಾಡುತ್ತೇವೆ. ಪಿಯುಸಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿರುವ ವಿದ್ಯಾರ್ಥಿ ಗೃಹ ಲಕ್ಷ್ಮೀ ಯೋಜನೆಯಿಂದ ತಮ್ಮ ಅಧ್ಯಯನಕ್ಕೆ ಸಹಕಾರಿಯಾಗಿದೆ ಎಂದು ಹೇಳಿದ್ದಾನೆ. ಇದಕ್ಕಿಂತ ನಿದರ್ಶನ ಬೇಕೇ? ಬಡವರ ಹಣ ಬಡವರಿಗೆ ನೀಡಿದರೆ ತಪ್ಪೇ?. ವಿದ್ಯುತ್ ಬಿಲ್ ಉಚಿತವಾಗಿದೆ. ಎಂದು ಪ್ರದೀಪ್ ಈಶ್ವರ್ ಪ್ರಶ್ನಿಸಿದರು.

ಬಿಜೆಪಿಯವರು ಹೇಗೆ ಅಷ್ಟು ಸ್ಥಾನ ಗೆಲ್ಲುತ್ತಾರೋ ಗೊತ್ತಿಲ್ಲ. ನಮ್ಮ ಸಮೀಕ್ಷೆ ಪ್ರಕಾರ ಕಾಂಗ್ರೆಸ್ 23 ಕ್ಕಿಂತ ಅಧಿಕ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ನನಗೆ ದೈವ ಬಲ ಇದೆ. ನಾನು 9 ತಿಂಗಳಲ್ಲಿ ಟೀಕೆ ಮಾಡಿದ ಬಿಜೆಪಿಯವರಿಗೆ ಟಿಕೆಟ್ ಸಿಕ್ಕಿಲ್ಲ. ಮುನಿಸ್ವಾಮಿ, ಅನಂತ್ ಕುಮಾರ್ ಹೆಗಡೆ, ಪ್ರತಾಪ್ ಸಿಂಹ, ಈಶ್ವರಪ್ಪ ಇದಕ್ಕೆ ಉದಾಹರಣೆ. ನಮ್ಮ ಮುಖ್ಯಮಂತ್ರಿಗಳು 13 ಬಜೆಟ್ ಗಳನ್ನು ಮಂಡಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಇಲ್ಲ ಎಂದರೆ ಗ್ಯಾರೆಂಟಿ ನಿಲ್ಲಿಸುತ್ತಾರೆ ಎಂಬುದು ಮತದಾರರಿಗೆ ತಿಳಿದಿರಬೇಕು ಎಂದರು.

ನಾನು ಬಿಜೆಪಿ ಅಭ್ಯರ್ಥಿ ಡಾ. ಸುಧಾಕರ್ ಬಗ್ಗೆ ಮಾತನಾಡಬಾರದು ಎಂದುಕೊಂಡಿರುತ್ತೇನೆ. ನನ್ನ ಮೇಲೆ ಅವರು 22 ಪ್ರಕರಣಗಳನ್ನು ದಾಖಲಿಸಿದಾಗ ನಾನು ಹತ್ತು ತಿಂಗಳು ಅಜ್ಞಾತವಾಸದಲ್ಲಿದ್ದೆ. ನಾಮಪತ್ರ ಸಲ್ಲಿಸಿದ ಸಂದರ್ಭದಲ್ಲಿ ಸುಧಾಕರ್ ಚಿಕ್ಕಬಳ್ಳಾಪುರಕ್ಕೆ 185 ಕೋಟಿ ರೂ ಮೊತ್ತದ ಯೋಜನೆಗಳನ್ನು ತಂದಿರುವುದಾಗಿ ಹೇಳಿದ್ದಾರೆ. ಇವೆಲ್ಲವೂ ಸುಳ್ಳು. ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಯ ಡಯಾಗ್ನಾಸ್ಟಿಕ್ ಸೆಂಟರ್ ಗೆ ನಮ್ಮ ಸರ್ಕಾರ 8.5 ಕೋಟಿ ರೂ ನೀಡಿದೆ. ಕಂದವಾರ ಕೆರೆ ಪುನಶ್ಚೇತನಕ್ಕಾಗಿ 200 ಕೋಟಿ ರೂ ಹಣ ದೊರೆತಿದೆ. ನನ್ನ ತಾಯಿ ಹೆಸರಿನಲ್ಲಿ ಆಂಬುಲೆನ್ಸ್ ಸೇವೆ ಅಬಾಧಿತವಾಗಿ ದೊರೆಯುತ್ತಿದೆ ಎಂದು ಪ್ರದೀಪ್ ಈಶ್ವರ್ ಹೇಳಿದರು.

ತಾಖತ್ತಿದ್ದರೆ ರಾಜೀನಾಮೆ ನೀಡಿ ಚುನಾವಣೆ ಎದುರಿಸುವಂತೆ ಸುಧಾಕರ್ ಸವಾಲು ಹಾಕುತ್ತಾರೆ. ನಾನು ನಿನ್ನೆ ಮೊನ್ನೆ ಗೆದ್ದಿದ್ದೇನೆ. ಬಿಸ್ಲೆರಿ ನೀರು ಕುಡಿದ ನಿಮಗೆ ಅಷ್ಟೊಂದು ತಾಖತ್ತಿದ್ದರೆ, ಕಾರ್ಪೋರೇಷನ್ ನೀರು ಕುಡಿದ ನನಗೆಷ್ಟು ತಾಖತ್ತಿರಬೇಕು. ನಾನು ಚಿಕ್ಕಬಳ್ಳಾಪುರದ ಮನೆ ಮನೆಗೆ ಭೇಟಿ ನೀಡಿ ಕಷ್ಟ ಸುಖ ವಿಚಾರಿಸುತ್ತಿದ್ದೇನೆ. ಬಿಜೆಪಿಯವರು ರಾಮನ ಹೆಸರು ಹೇಳುತ್ತಿದ್ದಾರೆ. ನನ್ನ ಎದೆ ಸೀಳಿದರೆ ಶ್ರೀರಾಮ, ಸಿದ್ದರಾಮಯ್ಯ ಇಬ್ಬರೂ ಇದ್ದಾರೆ. ನಮ್ಮ ಜೊತೆ ಸಾಕ್ಷತ್ ರಕ್ಷಾ ರಾಮಯ್ಯನವರೇ ಇದ್ದಾರೆ. ಬೋಗ ನಂದೀಶ್ವರ – ಈ ಈಶ್ವರ ಚಿಕ್ಕಬಳ್ಳಾಪುರದಲ್ಲೇ ಇದ್ದೇವೆ. ಎಂ.ಎಸ್. ರಾಮಯ್ಯ ಅವರ ಕುಟುಂಬದ ವಿದ್ಯಾರ್ಥಿ ವೇತನ ಪಡೆದು ಓದಿದವರಲ್ಲಿ ನಾನೂ ಒಬ್ಬ. ನಮ್ಮ ಅಭ್ಯರ್ಥಿ ರಕ್ಷಾ ರಾಮಯ್ಯ ಅವರ ಕ್ರಮ ಸಂಖ್ಯೆ 3. ಫಲಿತಾಂಶ ದಿನ ಬಿಜೆಪಿಗೆ ಮೂರು ನಾಮ ಖಚಿತ ಎಂದು ಭವಿಷ್ಯ ನುಡಿದರು.

ಮಾಜಿ ಶಾಸಕರಾದ ಎನ್. ಸಂಪಂಗಿ ಮಾತನಾಡಿ, ಯುವ ಕಾಂಗ್ರೆಸ್ ನಲ್ಲಿ ರಾಜ್ಯಾದ್ಯಂತ ಹೋರಾಟ ಮಾಡಿ, ಜನಪರ, ರಚನಾತ್ಮಕ ಕೆಲಸ ಮಾಡಿದ ರಕ್ಷಾ ರಾಮಯ್ಯ ಲೋಕಸಭಾ ಸದಸ್ಯರಾಗಲು ಸೂಕ್ತ ವ್ಯಕ್ತಿ. ಕಾಂಗ್ರೆಸ್ ದೊಡ್ಡ ಆಲದ ಮರವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೈ ಬಲಪಡಿಸಲು ನಾವೆಲ್ಲಾ ಹೋರಾಟಕ್ಕೆ ಅಣಿಯಾಗಬೇಕು ಎಂದರು.

ಹಿರಿಯ ಮುಖಂಡ ಯಲುವಳ್ಳಿ ರಮೇಶ್ ಮಾತನಾಡಿ, ಬಿಜೆಪಿ ಸುಳ್ಳಿ ಪಕ್ಷ ಎಂದು ಬಹಿರಂಗವಾಗಿ ಟೀಕಿಸಿದ್ದ ಸುಧಾಕರ್, ಇದೀಗ ಸುಳ್ಳನ್ನೇ ಅಪ್ಪಿಕೊಂಡಿದ್ದಾರೆ. ಸ್ವತಃ ಭ್ರಷ್ಟರಾದ ಸುಧಾಕರ್ ಅವರನ್ನು ಸೋಲಿಸಲು ನಾವೆಲ್ಲರೂ ಕಟಿಬದ್ಧರಾಗಬೇಕು. ರಕ್ಷಾ ರಾಮಯ್ಯ ಅವರನ್ನು ಲಕ್ಷಾಂತರ ಮತಗಳ ಅಂತರದಿಂದ ಗೆಲ್ಲಿಸಲು ಪ್ರತಿಯೊಬ್ಬರೂ ಶ್ರಮಿಸಬೇಕು ಎಂದರು.

WhatsApp Group Join Now
Telegram Group Join Now
Share This Article