ಎಲ್ಲಾ ಖಾಸಗಿ ಆಸ್ತಿಗಳನ್ನು ಸರ್ಕಾರ ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಖಾಸಗಿ ಆಸ್ತಿಗಳ ಸ್ವಾಧೀನಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ನ ಒಂಬತ್ತು ನ್ಯಾಯಮೂರ್ತಿಗಳ ಪೀಠ ಮಂಗಳವಾರ ಮಹತ್ವದ ತೀರ್ಪು ನೀಡಿದೆ. ಸಂವಿಧಾನದ ಪರಿಚ್ಛೇದ 39(ಬಿ) ಅಡಿಯಲ್ಲಿ ಪ್ರತಿಯೊಂದು ಖಾಸಗಿ ಆಸ್ತಿಯನ್ನು ಸಮುದಾಯದ ಆಸ್ತಿಯ ಭಾಗವಾಗಿ ಪರಿಗಣಿಸಲಾಗುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠ ಹೇಳಿದೆ.
ಈ ತೀರ್ಪಿನೊಂದಿಗೆ, ಎಲ್ಲಾ ಖಾಸಗಿ ಆಸ್ತಿಗಳನ್ನು ಸರ್ಕಾರ ಸ್ವಾಧೀನಪಡಿಸಿಕೊಳ್ಳಬಹುದು ಎಂದು ಹೇಳಿದ್ದ ನ್ಯಾಯಮೂರ್ತಿ ಕೃಷ್ಣ ಅಯ್ಯರ್ ಅವರ 1978 ರ ತೀರ್ಪನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತು.
ಇಂದಿನ ಆರ್ಥಿಕ ರಚನೆಯಲ್ಲಿ ಖಾಸಗಿ ವಲಯಕ್ಕೆ ಪ್ರಾಮುಖ್ಯತೆ ಇದೆ ಎಂದು ಸಿಜೆಐ ಹೇಳಿದರು. ತೀರ್ಪು ನೀಡುವಾಗ, ಪ್ರತಿಯೊಂದು ಖಾಸಗಿ ಆಸ್ತಿಯನ್ನು ಸಮುದಾಯದ ಆಸ್ತಿ ಎಂದು ಕರೆಯಲಾಗುವುದಿಲ್ಲ ಎಂದು ಹೇಳಿದರು. ಆಸ್ತಿಯ ಸ್ಥಿತಿಗತಿ, ಸಾರ್ವಜನಿಕ ಹಿತಾಸಕ್ತಿಯಲ್ಲಿ ಅದರ ಅಗತ್ಯತೆ ಮತ್ತು ಅದರ ಕೊರತೆಯಂತಹ ಪ್ರಶ್ನೆಗಳು ಖಾಸಗಿ ಆಸ್ತಿಗೆ ಸಮುದಾಯದ ಆಸ್ತಿಯ ಸ್ಥಾನಮಾನವನ್ನು ನೀಡಬಹುದು ಎಂದು ಹೇಳಿದ್ದಾರೆ.