ಜೆರುಸಲೇಂ : ಇಸ್ರೇಲ್ನ ಆರ್ಥಿಕತೆಯಲ್ಲಿ ತೀವ್ರ ಕುಸಿತ ಕಂಡು ಬಂದಿದೆ ಎಂದು ದೇಶದ ಸೆಂಟ್ರಲ್ ಬ್ಯೂರೋ ಆಫ್ ಸ್ಟ್ಯಾಟಿಸ್ಟಿಕ್ಸ್ ಭಾನುವಾರ ಬಿಡುಗಡೆ ಮಾಡಿದ ವರದಿ ತಿಳಿಸಿದೆ. ಮೊದಲ ತ್ರೈಮಾಸಿಕದಲ್ಲಿ ತೀವ್ರ ಏರಿಕೆಯ ನಂತರ ದೇಶದ ಆರ್ಥಿಕತೆಯು ತೀವ್ರವಾಗಿ ಕುಸಿದಿದೆ ಎಂದು ವರದಿ ತಿಳಿಸಿದೆ. ಮೊದಲ ತ್ರೈಮಾಸಿಕದ ಜಿಡಿಪಿಗೆ ಹೋಲಿಸಿದರೆ ಎರಡನೇ ತ್ರೈಮಾಸಿಕದಲ್ಲಿ ಇಸ್ರೇಲ್ನ ಜಿಡಿಪಿ ಶೇಕಡಾ 1.2 ರಷ್ಟು ಏರಿಕೆಯಾಗಿ ಶೇಕಡಾ 17.3 ಕ್ಕೆ ತಲುಪಿತ್ತು. ವಾರ್ಷಿಕ ಆಧಾರದ ಮೇಲೆ, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಇಸ್ರೇಲ್ ಜಿಡಿಪಿ ಶೇಕಡಾ 1.4 ರಷ್ಟು ಕುಸಿತ ಕಂಡಿದೆ.
ಇಸ್ರೇಲ್ನಲ್ಲಿ ಖಾಸಗಿ ಬಳಕೆಯ ವೆಚ್ಚವು ಎರಡನೇ ತ್ರೈಮಾಸಿಕದಲ್ಲಿ ಶೇಕಡಾ 12 ರಷ್ಟು ಹೆಚ್ಚಾಗಿದೆ ಎಂದು ಡೇಟಾ ತೋರಿಸಿದೆ. ಇದು ಮೊದಲ ತ್ರೈಮಾಸಿಕದಲ್ಲಿ ದಾಖಲಾಗಿದ್ದ ಶೇಕಡಾ 26.3 ರಷ್ಟು ಏರಿಕೆಗಿಂತ ಕಡಿಮೆಯಾಗಿದೆ. ಕಳೆದ ವರ್ಷ ಅಕ್ಟೋಬರ್ 7 ರಂದು ನಡೆದ ಹಮಾಸ್ ದಾಳಿಯ ಪರಿಣಾಮಗಳಿಂದ ಇಸ್ರೇಲಿ ಆರ್ಥಿಕತೆಯು ಚೇತರಿಸಿಕೊಂಡಿಲ್ಲವೆಂಬುದನ್ನು ಈ ಕಡಿಮೆ ಬೆಳವಣಿಗೆಯ ಅಂಕಿಅಂಶಗಳು ಸೂಚಿಸುತ್ತವೆ ಎಂದು ಯೆಡಿಯೋತ್ ಅಹ್ರೋನೋತ್ ಪತ್ರಿಕೆಯ ಹಿರಿಯ ವಿಶ್ಲೇಷಕ ಗ್ಯಾಡ್ ಲಿಯೋರ್ ಕ್ಸಿನ್ಹುವಾಗೆ ತಿಳಿಸಿದರು.
ಸರಕು ಮತ್ತು ಸೇವೆಗಳ ಆಮದುಗಳು ಕೂಡ ಕಡಿಮೆಯಾಗಿದ್ದು, ಮೊದಲ ತ್ರೈಮಾಸಿಕದಲ್ಲಿ ಶೇಕಡಾ 32.7 ರಷ್ಟು ಹೆಚ್ಚಳದ ನಂತರ ಎರಡನೇ ತ್ರೈಮಾಸಿಕದಲ್ಲಿ ಆಮದುಗಳು ಶೇಕಡಾ 11.1 ರಷ್ಟು ಕಡಿಮೆಯಾಗಿವೆ. ವಜ್ರಗಳು ಮತ್ತು ಸ್ಟಾರ್ಟ್ ಅಪ್ ಕಂಪನಿಗಳನ್ನು ಹೊರತುಪಡಿಸಿ ಸರಕು ಮತ್ತು ಸೇವೆಗಳ ರಫ್ತು ಎರಡನೇ ತ್ರೈಮಾಸಿಕದಲ್ಲಿ ಶೇಕಡಾ 7.1 ರಷ್ಟು ಕಡಿಮೆಯಾಗಿದೆ. ಮೊದಲ ತ್ರೈಮಾಸಿಕದಲ್ಲಿ ಇದು ಶೇಕಡಾ 10.4 ರಷ್ಟು ಇಳಿಕೆಯಾಗಿತ್ತು.
ಅಕ್ಟೋಬರ್ 7, 2023 ರಿಂದ ಇಸ್ರೇಲ್ ಗಾಜಾ ಪಟ್ಟಿಯಲ್ಲಿ ಯುದ್ಧ ನಡೆಸುತ್ತಿದೆ. ಈ ಯುದ್ಧದಲ್ಲಿ ಈವರೆಗೆ ಸುಮಾರು 40,100 ಜನ ಸಾವಿಗೀಡಾಗಿದ್ದು, 92,600 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಪ್ರಸ್ತುತ ಯುದ್ಧಕ್ಕೆ ಮಾಡಲಾಗುತ್ತಿರುವ ವೆಚ್ಚ ಕೂಡ ಇಸ್ರೇಲ್ ಆರ್ಥಿಕತೆ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ.
ಗಾಜಾ ಯುದ್ಧದ ಬಗ್ಗೆ ಹಮಾಸ್ ಜೊತೆ ನಡೆಯುತ್ತಿರುವ ಮಾತುಕತೆಯಲ್ಲಿ ಕದನ ವಿರಾಮ ಒಪ್ಪಂದಕ್ಕೆ ಬರುವ ಅವಕಾಶವನ್ನು ಕಳೆದುಕೊಳ್ಳಬೇಡಿ ಎಂದು ಇಸ್ರೇಲ್ ವಿರೋಧ ಪಕ್ಷದ ನಾಯಕ ಯೈರ್ ಲ್ಯಾಪಿಡ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಒತ್ತಾಯಿಸಿದ್ದಾರೆ. “ಇದು ಕೊನೆಯ ಅವಕಾಶವಾಗಬಹುದು ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಇಂದು ಬೆಳಿಗ್ಗೆ ಹೇಳಿದ್ದಾರೆ. ಈ ಅವಕಾಶ ಕಳೆದುಕೊಳ್ಳಬೇಡಿ ಎಂದು ನೆತನ್ಯಾಹು ಅವರಿಗೆ ಮನವಿ” ಎಂದು ಯೈರ್ ಲ್ಯಾಪಿಡ್ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಬರೆದಿದ್ದಾರೆ