ಟೆಲ್ ಅವೀವ್ : ಹಮಾಸ್ ಉಗ್ರಗಾಮಿ ಸಂಘಟನೆಯ ರಾಜಕೀಯ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ ಅವರನ್ನು ಇರಾನ್ನಲ್ಲಿ ದಾಳಿ ನಡೆಸಿ ಕೊಂದ ನಂತರ ಇಸ್ರೇಲ್, ಈಗ ಆ ಸ್ಥಾನಕ್ಕೆ ನೇಮಕವಾಗಿರುವ ಮತ್ತೋರ್ವ ಹಮಾಸ್ ನಾಯಕ ಯಾಹ್ಯಾ ಸಿನ್ವರ್ನನ್ನು ಹುಡುಕಲು ಶತಪ್ರಯತ್ನ ಮಾಡುತ್ತಿದೆ. ಗಾಜಾದಲ್ಲಿರುವ ತನ್ನ ಜಾಲದ ಮೂಲಕ ಸಿನ್ವರ್ ಬಗ್ಗೆ ಇಸ್ರೇಲ್ ಗುಪ್ತಚರ ಇಲಾಖೆ ಸಾಧ್ಯವಾದಷ್ಟು ಹೆಚ್ಚಿನ ಮಾಹಿತಿಯನ್ನು ಕಲೆ ಹಾಕುತ್ತಿದೆ.
ಸಿನ್ವರ್ನನ್ನು ಹುಡುಕಿ ಕೊಲ್ಲುವುದಾಗಿ ಇಸ್ರೇಲ್ನ ಉನ್ನತ ನಾಯಕರಲ್ಲಿ ಒಬ್ಬರಾದ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಪುನರುಚ್ಚರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಲಭ್ಯವಿರುವ ಮಾಹಿತಿಯ ಪ್ರಕಾರ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ರಕ್ಷಣಾ ಸಚಿವ ಗ್ಯಾಲಂಟ್ ಅವರು ಮೊಸಾದ್ ಮುಖ್ಯಸ್ಥ ಡೇವಿಡ್ ಬಾರ್ನಿಯಾ ಮತ್ತು ಶಿನ್ ಬೆಟ್ ಮುಖ್ಯಸ್ಥ ರೋನನ್ ಬಾರ್ ಅವರನ್ನು ಭೇಟಿಯಾಗಿ ಸಿನ್ವರ್ನನ್ನು ಆದಷ್ಟು ಬೇಗ ನಿರ್ಮೂಲನೆ ಮಾಡುವ ತುರ್ತು ಅಗತ್ಯವನ್ನು ವಿವರಿಸಿದರು.
ಯಾವುದೇ ಬೆಲೆ ತೆತ್ತಾದರೂ ಸರಿ ಯಾಹ್ಯಾ ಸಿನ್ವರ್ನನ್ನು ಹುಡುಕಿ ಕೊಲ್ಲಲಾಗುವುದು ಎಂದು ಈ ಹಿಂದೆ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಸಾರ್ವಜನಿಕವಾಗಿ ಘೋಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
“ಯಾಹ್ಯಾ ಸಿನ್ವರ್ ಓರ್ವ ಭಯೋತ್ಪಾದಕ. ಆತ ಅಕ್ಟೋಬರ್ 7ರಂದು ನಡೆದ ಇತಿಹಾಸದ ಅತ್ಯಂತ ಕ್ರೂರ ಭಯೋತ್ಪಾದಕ ದಾಳಿಗೆ ಕಾರಣಕರ್ತನಾಗಿದ್ದಾನೆ. ಮೊಹಮ್ಮದ್ ದೀಫ್ ಮತ್ತು ಇತರ ಮೃತ ಭಯೋತ್ಪಾದಕರು ಹೋದಲ್ಲಿಯೇ ಆತನೂ ಹೋಗಲಿದ್ದಾನೆ. ಆತನನ್ನು ಅಲ್ಲಿಗೆ ಕಳುಹಿಸಲು ನಾವು ಸಿದ್ಧತೆ ನಡೆಸುತ್ತಿದ್ದೇವೆ” ಎಂದು ಸಿನ್ವರ್ ಅವರನ್ನು ಹಮಾಸ್ ರಾಜಕೀಯ ಮುಖ್ಯಸ್ಥರನ್ನಾಗಿ ಘೋಷಿಸಿದ ನಂತರ ಇಸ್ರೇಲ್ ರಕ್ಷಣಾ ಪಡೆಗಳ (ಐಡಿಎಫ್) ವಕ್ತಾರ ರಿಯರ್ ಅಡ್ಮಿರಲ್ ಡೇನಿಯಲ್ ಹಗರಿ ಪತ್ರಿಕಾ ಹೇಳಿಕೆಯಲ್ಲಿ ಘೋಷಿಸಿದ್ದಾರೆ.