ಬಳ್ಳಾರಿ,ಆ.೦5: ಮಹಾನ್ ಮಾನವತಾವಾದಿ ಈಶ್ವರಚಂದ್ರ ವಿದ್ಯಾಸಾಗರರು ನಮ್ಮನ್ನಗಲಿ ಇದೀಗ ೧೩೪ ವರ್ಷಗಳು. ಭಾರತದ ಮಹಿಳೆಯರು ಅತ್ಯಂತ ಕೃತಜ್ಞತೆಯಿಂದ ಸ್ಮರಿಸಬೇಕಾದ ಮಹಾನ್ ಚೇತನ ಎಂದು ಎಐಎಂಎಸ್‌ಎಸ್ ನ ರಾಜ್ಯಾಧ್ಯಕ್ಷ ಎಂ. ಎನ್. ಮಂಜುಳಾ ಅವರು ಹೇಳಿದರು.
ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಧರ್ಮನಿರಪೇಕ್ಷ ಮಾನವತಾವಾದಿ ಈಶ್ವರಚಂದ್ರ ವಿದ್ಯಾಸಾಗರ ರವರ ೧೩೪ನೇ ವರ್ಷದ ಸ್ಮರಣ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂದಿನ ಕಾಲದಲ್ಲಿ ಶಿಕ್ಷಿತ ಹೆಣ್ಣುಮಕ್ಕಳು ಗಂಡAದಿರಿಗೆ ಅವಿಧೇಯರಾಗುವರು ಎಂಬ ಭಯದಿಂದ ಪುರುಷಪ್ರಧಾನ ಸಮಾಜ ಅವರನ್ನು ಹೊರಹೋಗಲು ಬಿಡದೆ ಬಂಧಿಸಿತ್ತು, ವಿದ್ಯೆ ಪಡೆದವರು ವಿಧವೆಯಾಗುವರು ಎಂದೂ ಹೆದರಿಸಿತ್ತು. ವಿದ್ಯಾಸಾಗರರು, ಸ್ತ್ರೀ ಶಿಕ್ಷಣ ಕುರಿತಾದ ಸೂಕ್ತಿಗಳನ್ನು ಸಂಸ್ಕೃತ ಶಾಸ್ತ್ರಗಳಲ್ಲಿ ತೋರಿಸಿ ಸಂಪ್ರದಾಯವಾದಿಗಳನ್ನು ಎದುರಿಸದರು ಎಂದು ಹೇಳಿದರು.
೧೮೫೭ರ ನವೆಂಬರ್‌ನಿAದ ೧೮೫೮ ರವರೆಗೆ ಅವರು ೩೩ ಶಾಲೆಗಳನ್ನು ತಮ್ಮ ಖರ್ಚಿನಲ್ಲೇ ತೆರೆದರು. ಏಕವ್ಯಕ್ತಿಯೊಬ್ಬರ ಅಪರೂಪದ ಸಾಧನೆ ಇದು! ಇದಕ್ಕಾಗಿ ಬಂಗಾಲದುದ್ದಗಲಕ್ಕೂ ನಡಿಗೆಯಲ್ಲಿ ಅಥವಾ ಎತ್ತಿನಗಾಡಿಯಲ್ಲಿ ಸಂಚರಿಸಿದ ವಿದ್ಯಾಸಾಗರರ ಅವಿರತ, ಪರಿಶ್ರಮ ಮತ್ತು ದೃಢತೆಗೆ ಸಾಟಿಯುಂಟೆ? ‘ವೇದಾಂತ ಮತ್ತು ಸಾಂಖ್ಯ’ಗಳನ್ನು ಮಿಥ್ಯಾ ಶಾಸ್ತ್ರಗಳೆಂದು ಕರೆದ ಅವರು ಒತ್ತು ಕೊಟ್ಟಿದ್ದು ವೈಜ್ಞಾನಿಕ, ಪ್ರಜಾತಾಂತ್ರಿಕ ಶಿಕ್ಷಣಕ್ಕೆ. ವಿದ್ಯಾಸಾಗರರು ಅತ್ಯಂತ ಕೆಳಮಟ್ಟದ ಜೀವನಕ್ಕೆ ತಳ್ಳಲ್ಪಟ್ಟ ಬಾಲವಿಧವೆಯರೆಡೆಗಿನ ಅಪಾರ ಅನುಕಂಪ ಮತ್ತು ಮಾನವೀಯತೆಯಿಂದ ವಿಧವಾ ವಿವಾಹಕ್ಕಾಗಿ ಹೋರಾಟ ನಡೆಸಿದ್ದನ್ನು ಮರೆಯಲಾದೀತೇ! ವಿಧವಾ ವಿವಾಹಕ್ಕಾಗಿ ಸಂಪ್ರದಾಯವಾದಿಗಳನ್ನು ಎದುರಿಸಲು ಅವರು ಶಾಸ್ತ್ರಗಳ ಮೊರೆ ಹೋಗಬೇಕಾಯಿತು ಎಂದು ತಿಳಿಸಿದರು.
ವಿಧವಾ ಮರುವಿವಾಹದ ಕುರಿತು ಸಂಶೋಧನೆ ನಡೆಸಿ ೧೮೫೫ರಲ್ಲಿ ಅವರು ಪುಸ್ತಕ ಒಂದನ್ನು ಬರೆದರು. ಅವರ ಮೇಲೆ ಸಂಪ್ರದಾಯಸ್ಥರು ವಿಷವನ್ನೇ ಉಗುಳಿದರು. ಆದರೂ ಜನತೆಯ ಬೆಂಬಲ ಗಳಿಸಲು ಅವರು ಮೈಲುಗಟ್ಟಲೆ ನಡೆದು ತಮ್ಮ ಚಿಂತನೆಗಳ ಪರವಾಗಿ ಸಹಿಸಂಗ್ರಹ ಮಾಡಿದರು. ಧ್ವನಿ ಇಲ್ಲದವರ ಧ್ವನಿಯಾದರು; ೧೮೫೬ರಲ್ಲಿ ವಿಧವಾವಿವಾಹದ ಪರವಾಗಿ ಕಾನೂನು ಜಾರಿಯಾಗುವುದಕ್ಕೆ ಕಾರಣಕರ್ತರಾದರು. ತಮ್ಮ ಮಗ ನಾರಾಯಣ ವಿಧವೆಯೊಬ್ಬರನ್ನು ವಿವಾಹವಾಗಲು ಅವರ ಅನುಮತಿ ಕೇಳಿದಾಗ ಅವರು ಸಂಭ್ರಮಿಸಿದರು. ತಾವು ಬೋಧಿಸಿದ್ದನ್ನು ತಮ್ಮ ಜೀವನದಲ್ಲಿ ಅಕ್ಷರಶಃ ಪಾಲಿಸಿ ಅನೇಕರಿಗೆ ಮಾದರಿಯಾದರು. ಸಂಬAಧಿಕರಿAದಲೇ ಈ ಕುರಿತು ವಿರೋಧ ಬಂದರೂ ಅವರು ಹಿಮ್ಮೆಟ್ಟಲಿಲ್ಲ. ವಿದ್ಯಾಸಾಗರರ ಇನ್ನೊಂದು ಪ್ರಮುಖ ಹೋರಾಟವೆಂದರೆ, ಅದು ಬಾಲ್ಯ ವಿವಾಹ ಹಾಗೂ ಬಹುಪತ್ನಿತ್ವದ ವಿರುದ್ಧ. ಜನರ ಮನ ಪರಿವರ್ತನೆಯೇ ಸರಿಯಾದ ದಾರಿ ಎಂದು ಮನಗಂಡ ವಿದ್ಯಸಾಗರರು ಬಹುಪತ್ನಿತ್ವಕ್ಕೆ ಏಕೆ ನಿಷೇಧ ಬೇಕು ಎಂದು ವಿವರಿಸಿ ಪುಸ್ತಕಗಳನ್ನು ಬರೆದರು. ೧೮೫೫ರಲ್ಲಿ ವಿದ್ಯಾಸಾಗರರು ಪ್ರಕಟಿಸಿದ ಪುಸ್ತಕ ಸನಾತನಿಗಳ ಬಾಯಿಗೆ ಬೀಗ ಹಾಕಿತು ಎಂದು ಸ್ಮರಿಸಿದರು.
ಹೋಮಿಯೊಪತಿ ಶಿಕ್ಷಣ ಪಡೆದಿದ್ದ ವಿದ್ಯಾಸಾಗರರು ಜಾತಿಭೇದವಿಲ್ಲದೆ ಬಡಜನರಿಗೆ ಉಚಿತ ಸೇವೆ ನೀಡುತ್ತಿದ್ದರು. ಎಷ್ಟೋ ವೇಳೆ ಕಾಲರಾ ಪೀಡಿತ ರೋಗಿಗಳನ್ನು ತಮ್ಮ ಮನೆಗೇ ಕರೆತಂದು ಅವರ ಶುಶ್ರೂಷೆ ಮಾಡಿದ್ದುಂಟು, ಶೌಚಾದಿಗಳನ್ನು ಸ್ವಚ್ಛ ಮಾಡಿದ್ದುಂಟು. ಇಂಥ ವಿದ್ಯಾಸಾಗರರು ಪಡೆದ ಜನಪ್ರೀತಿಯೂ ಅಪಾರ. ತಮ್ಮ ಜೀವಿತದಲ್ಲೇ ಅವರು ದಂತಕತೆಯಾಗಿದ್ದರು. ಮನೆಮನೆಗಳಲ್ಲಿ ಅವರ ಫೋಟೋ ರಾರಾಜಿಸುತ್ತಿತ್ತು. ಅವರ ಮೇಲೆ ಹಾಡುಗಳು ರಚನೆಯಾಗಿ ಜನ ಅವರ ದೀರ್ಘಾಯುಕ್ತಿಗಾಗಿ ಪ್ರಾರ್ಥಿಸಿ ಹಾಡುತ್ತಿದ್ದರು.
ಸಾಂಪ್ರದಾಯಿಕ ಸಮಾಜದ ಪುರಾತನ ರೂಢಿ-ಆಚರಣೆಗಳನ್ನು ಧಿಕ್ಕರಿಸಿ, ತಾವು ಬದ್ಧರಾಗಿದ್ದ ಪ್ರಗತಿಪರ ಚಿಂತನೆಗಳಿಗೆ ಹೋರಾಡಿದ, ದೇಶದ ನವೋದಯದ ಹರಿಕಾರರಲ್ಲಿ ಅಗ್ರಮಾನ್ಯ ಸ್ಥಾನ ಪಡೆದ ಈಶ್ವರಚಂದ್ರ ವಿದ್ಯಾಸಾಗರರು ಸದಾ ಸ್ಮರಣೀಯರು. ಇಂದು ಅಪೂರ್ಣವಾಗಿರುವ ಅವರ ಹೋರಾಟವನ್ನು ಮುಂದುವರಿಸಿದರೆ ಮಾತ್ರ ಅವರಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ. ಈ ನಿಟ್ಟಿನಲ್ಲಿ ತಾವೆಲ್ಲರೂ ಸಜ್ಜಾಗಬೇಕು” ಎಂದು ಕರೆ ನೀಡಿದರು.
ಎಐಎಂಎಸ್‌ಎಸ್ ಜಿಲ್ಲಾಧ್ಯಕ್ಷ ಈಶ್ವರಿ.ಕೆ.ಎಂ. ಮಾತನಾಡುತ್ತಾ “ಇಂದು ಸ್ತ್ರೀಭ್ರೂಣ ಹತ್ಯೆ, ಬಾಲ್ಯ ವಿವಾಹ, ಬಾಲಗರ್ಭಿಣಿಯರ ಸಂಖ್ಯೆ ಹೆಚ್ಚಾಗುತ್ತಿವೆ. ಈ ಎಲ್ಲಾ ಸಮಸ್ಯೆಗಳ ಬಗ್ಗೆ ಜನತೆಯಲ್ಲಿ ಜಾಗೃತಿ ಮೂಡಿಸಲು ಹಾಗೂ ಸರ್ಕಾರಕ್ಕೆ ಈ ಸಮಸ್ಯೆಗಳನ್ನು ಬಗೆಹರಿಸಲು ಒತ್ತಡ ತರುವ ನೆಟ್ಟಿನಲ್ಲಿ ಎಐಎಂಎಸ್‌ಎಸ್ ಒಂದು ತಿಂಗಳಿನಾದ್ಯAತ ‘ಜನಿಸುವ- ಅರಳುವ-ಬದುಕುವ ಹಕ್ಕಿಗಾಗಿ ಮಹಿಳೆಯರ ಆಗ್ರಹ’ ಎಂಬ ಘೋಷವಾಕ್ಯದಡಿ ವಿವಿಧ ಸ್ತರಗಳ ಮಹಿಳೆಯರ ಹಾಗೂ ವಿದ್ಯಾರ್ಥಿನಿಯರ ನಡುವೆ ಹಲವಾರು ಕಾರ್ಯಕ್ರಮಗಳ ಮೂಲಕ ಜಾಗೃತಿಯನ್ನು ಮೂಡಿಸುತ್ತಿದೆ. ಈ ಕಾರ್ಯಕ್ಕೆ ತಾವೆಲ್ಲರೂ ಕೈಜೋಡಿಸಬೇಕು” ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ಪ್ರಜ್ಞಾ ಅವರು ಅಧ್ಯಕ್ಷೀಯ ಮಾತುಗಳಾಡಿದರು. ಕಾರ್ಯಕ್ರಮದಲ್ಲಿ ಎಐಎಂಎಸ್‌ಎಸ್ ನ ಸಂಘಟನಾಕಾರರಾದ ವಿಜಯಲಕ್ಷ್ಮಿ, ಸೌಮ್ಯ, ವಿದ್ಯಾ, ಪುಷ್ಪ, ಕಾಲೇಜಿನ ಬೋಧಕ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.