ಪೀಣ್ಯ ಪ್ಲಾಂಟೇಷನ್ ನಲ್ಲಿ ಲಾಲ್ ಬಾಗ್ ರೀತಿ ಉದ್ಯಾನ ಮಾಡುವ ಈಶ್ವರ ಖಂಡ್ರೆ ಆಶಯಕ್ಕೆ ಬಲ

Ravi Talawar
ಪೀಣ್ಯ ಪ್ಲಾಂಟೇಷನ್ ನಲ್ಲಿ ಲಾಲ್ ಬಾಗ್ ರೀತಿ ಉದ್ಯಾನ ಮಾಡುವ ಈಶ್ವರ ಖಂಡ್ರೆ ಆಶಯಕ್ಕೆ ಬಲ
WhatsApp Group Join Now
Telegram Group Join Now

ಎಚ್ಎಂಟಿ ವಶದಲ್ಲಿದ್ದ 5 ಎಕರೆ ಅರಣ್ಯ ಭೂಮಿ ಮರುವಶ

ಬೆಂಗಳೂರು, ಅ.25: ಎಚ್ಎಂಟಿ ವಶದಲ್ಲಿರುವ ಪೀಣ್ಯ ಪ್ಲಾಂಟೇಷನ್ ನ 599 ಎಕರೆ ಅರಣ್ಯದ ಪೈಕಿ ಅರಣ್ಯ ಸ್ವರೂಪದ ಮತ್ತು ಖಾಲಿ ಜಮೀನು ವಶಕ್ಕೆ ಪಡೆದು ಬೃಹತ್ ಉದ್ಯಾನ ನಿರ್ಮಿಸುವ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅವರ ಆಶಯಕ್ಕೆ ಅಧಿಕಾರಿಗಳು ಇಂದು ಬಲ ನೀಡಿದ್ದಾರೆ.

ಎಚ್ಎಂಟಿ ವಶದಲ್ಲಿದ್ದ ಪೀಣ್ಯ- ಜಾಲಹಳ್ಳಿ ಸರ್ವೆ ನಂ. 1ರಲ್ಲಿ ಇಂದು ಜೆಸಿಬಿಯೊಂದಿಗೆ ಕಾರ್ಯಾಚರಣೆಗೆ ಇಳಿದ ಅರಣ್ಯ ಇಲಾಖೆ ಬೆಂಗಳೂರು ನಗರ ವಲಯದ ಅಧಿಕಾರಿಗಳು 5 ಎಕರೆ ಖಾಲಿ ಜಮೀನನ್ನು ಮರುವಶಕ್ಕೆ ಪಡೆದಿದ್ದು ಅಲ್ಲಿ ಕರ್ನಾಟಕ ಅರಣ್ಯ ಇಲಾಖೆ ಫಲಕವನ್ನು ನೆಟ್ಟು ತಮ್ಮ ಹಕ್ಕು ಪ್ರತಿಪಾದಿಸಿದ್ದಾರೆ.

1896 ಮೇ 29ರ ಸರ್ಕಾರದ ಅಧಿಸೂಚನೆ ಸಂಖ್ಯೆ 10407, ಎಫ್.ಟಿ.ಎಫ್. 153-95 ಮತ್ತು 1901ರ ಜನವರಿ 7ರ ಅಧಿಸೂಚನೆ ಸಂಖ್ಯೆ 422-ಎಫ್.ಟಿ.ಎಫ್.-15-1900ರ ರೀತ್ಯ ಪೀಣ್ಯ, ಜಾಲಹಳ್ಳಿ ಪ್ಲಾಂಟೇಷನ್ ನಲ್ಲಿರುವ 599 ಎಕರೆ ಜಮೀನು ಅರಣ್ಯವಾಗಿರುತ್ತದೆ. ಅರಣ್ಯೇತರ ಉದ್ದೇಶಕ್ಕೆ ಭೂಪರಿವರ್ತನೆ ಆಗದ ಈ ಜಮೀನು once a forest is always a forest ಎಂಬ ಸುಪ್ರೀಂಕೋರ್ಟ್ ಅಭಿಪ್ರಾಯದಂತೆ ಅರಣ್ಯವೇ ಆಗಿದೆ ಎಂದು ಈಶ್ವರ ಖಂಡ್ರೆ ಪ್ರತಿಪಾದಿಸಿದ್ದರು.

ಸದರಿ ಜಮೀನು ಅರಣ್ಯ ಸ್ವರೂಪ ಕಳೆದುಕೊಂಡಿದೆ ಎಂದು ಡಿನೋಟಿಫಿಕೇಷನ್ ಗೆ ಅನುಮತಿ ಕೋರಿ ಅರಣ್ಯಾಧಿಕಾರಿಗಳು ನಿಯಮಬಾಹಿರವಾಗಿ ಸಲ್ಲಿಸಿದ್ದ ಇಂಟರ್ ಲೊಕೇಟರಿ ಅಪ್ಲಿಕೇಶನ್ (ಐ.ಎ.) ಹಿಂಪಡೆಯಲೂ ಸೂಚನೆ ನೀಡಿದ್ದರು.

ಈ ಮಧ್ಯೆ ಎಚ್ಎಂಟಿ ತನ್ನ ವಶದಲ್ಲಿದ್ದ ಅರಣ್ಯ ಭೂಮಿಯ ಪೈಕಿ 165ಕ್ಕೂ ಹೆಚ್ಚು ಎಕರೆ ಜಮೀನನ್ನು ಕೇವಲ 300 ಕೋಟಿ ರೂಪಾಯಿಗಳಿಗೆ ಖಾಸಗಿ ಮತ್ತು ಸರ್ಕಾರದ ವಿವಿಧ ಸಂಸ್ಥೆಗಳಿಗೆ ಮಾರಾಟ ಮಾಡಿತ್ತು.

ಈ ಭೂಮಿಯನ್ನು ವಶಕ್ಕೆ ಪಡೆದು ಲಾಲ್ ಬಾಗ್, ಕಬ್ಬನ್ ಪಾರ್ಕ್ ನಂತಹ ಬೃಹತ್ ಉದ್ಯಾನ ಇಲ್ಲದ ಉತ್ತರ ಬೆಂಗಳೂರಿನಲ್ಲಿ ವೃಕ್ಷೋದ್ಯಾನ ನಿರ್ಮಿಸಿ ಆ ಭಾಗದ ಬೆಂಗಳೂರಿಗರಿಗೆ ಅತ್ಯುತ್ತಮ ಶ್ವಾಸತಾಣ ಮಾಡುವ ಆಶಯವನ್ನು ಈಶ್ವರ ಖಂಡ್ರೆ ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಇಂದು ಅಧಿಕಾರಿಗಳು ಪ್ರಥಮ ಹೆಜ್ಜೆ ಇಟ್ಟಿದ್ದಾರೆ.

WhatsApp Group Join Now
Telegram Group Join Now
Share This Article