♦ 700 ಕೋಟಿ ರೂ. ವೆಚ್ಚದಲ್ಲಿ ಅನುಭವ ಮಂಟಪ ನಿರ್ಮಾಣ – ಈಶ್ವರ ಖಂಡ್ರೆ
ಹೊಳೆ ನರಸೀಪುರ: ವಿಶ್ವಗುರು ಬಸವಣ್ಣನವರು ದಯೆಯೇ ಧರ್ಮದ ಮೂಲವಯ್ಯ ಎಂದು ಹೇಳಿದ್ದರು. ಆದರೆ ಇಂದು ಧರ್ಮದ ಹೆಸರಲ್ಲಿ ಆಂತಕ ಸೃಷ್ಟಿಸುವ ಕಾರ್ಯವನ್ನು ಕೆಲವರು ಮಾಡುತ್ತಿದ್ದಾರೆ ಇದು ಆತಂಕದ ವಿಷಯ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.
ಹಾಸನ ಜಿಲ್ಲೆ ಹೊಳೆ ನರಸೀಪುರದಲ್ಲಿಂದು ವೀರಶೈವ ಲಿಂಗಾಯತ ಸಮಾಜ ಆಯೋಜಿಸಿದ್ದ ಬಸವ ಜಯಂತಿ ಮತ್ತು ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿಯವರ ಜಯಂತ್ಯುತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಧರ್ಮದ ಹೆಸರಲ್ಲಿ ಆತಂಕ ಸೃಷ್ಟಿಸುವವರ ಬಗ್ಗೆ ಸಮಾಜ ಎಚ್ಚರದಿಂದ ಇರಬೇಕು ಎಂದರು.
ಜಗಜ್ಯೋತಿ ಬಸವೇಶ್ವರರು, ಶ್ರೀ ಶಿವಕುಮಾರ ಸ್ವಾಮೀಜಿಯವರಂತಹ ಸಾಮಾಜಿಕ ಪರಿವರ್ತನೆಗೆ ಶ್ರಮಿಸಿದ ಮಹಾ ಮಹಿಮರ ಜಯಂತಿ ಆಚರಣೆಯಿಂದ ಇಂದಿನ ಪೀಳಿಗೆಗೆ ಸ್ಫೂರ್ತಿ, ಚೈತನ್ಯ ಮೂಡುತ್ತದೆ ಎಂದರು. ಸಾಮಾಜಿಕ ಸಾಮರಸ್ಯ ಇಂದಿನ ಅಗತ್ಯವಾಗಿದೆ ಎಂದು ಪ್ರತಿಪಾದಿಸಿದರು.
12ನೇ ಶತಮಾನದಲ್ಲಿ ಬಸವಣ್ಣನವರು ಸಾಮಾಜಿಕ ಕ್ರಾಂತಿಯನ್ನೇ ಮಾಡಿದರೆ, 20ನೇ ಶತಮಾನದಲ್ಲಿ ಸಮಾನತೆಯ ಸಂದೇಶ ಸಾರಿ ತ್ರಿವಿಧ ದಾಸೋಹದಿಂದ ಎಲ್ಲ ಸಮುದಾಯದವರಿಗೆ ಅನ್ನ, ಆಶ್ರಯ ಮತ್ತು ಅಕ್ಷರ ಕೊಟ್ಟವರು ಡಾ.ಶ್ರೀ.ಶ್ರೀ. ಶಿವಕುಮಾರ ಸ್ವಾಮೀಜಿ ಎಂದರು.
ವಿಶ್ವಗುರು ಬಸವಣ್ಣನವರು, ಕಾಯಕ, ಸಹಯೋಗ, ಸೋದರತ್ವದ ಬುನಾದಿಯ ಮೇಲೆ ಸುಂದರ ಸಮಾಜದ ನಿರ್ಮಾಣದ ಕನಸು ಕಂಡಿದ್ದರು. ಸರ್ವರಿಗೂ ಸಮಾನ ಅವಕಾಶ ಸಿಗಬೇಕು ಎಂಬ ಕನಸು ಕಂಡಿದ್ದರು ಎಂದರು.
ಸಕಲ ಜೀವಾತ್ಮರಿಗೂ ಲೇಸನ್ನೇ ಬಯಸುವುದು ಲಿಂಗಾಯತ ಸಮಾಜ. ಈ ಜಗತ್ತಿನಲ್ಲಿ ಹುಟ್ಟಿದ ಪ್ರತಿಯೊಂದು ಸಸ್ಯ, ಕೀಟ, ಪ್ರಾಣಿ, ಪಕ್ಷಿ ಎಲ್ಲರಿಗೂ ಬದುಕುವ ಹಕ್ಕಿದೆ. ನಾವು ಸಹಬಾಳ್ವೆಯಿಂದ ಜೀವನ ನಡೆಸುವುದನ್ನು ಕಲಿಯಬೇಕು ಎಂದರು.
ನಮ್ಮ ವಚನದಲ್ಲಿ ಅನುಭಾವ ಇದೆ. ಇಂದಿನ ಮಕ್ಕಳಿಗೆ ನಮ್ಮ ತಾಯಂದಿರು ವಚನಗಳನ್ನು ಕಲಿಸಬೇಕು. ಇದು ಅವರಲ್ಲಿ ನೈತಿಕತೆ ಹೆಚ್ಚಿಸುತ್ತದೆ. ಭಾಷೆಯ ಪ್ರೌಢಿಮೆ ಬೆಳೆಸುತ್ತದೆ ಎಂದರು.
700 ಕೋಟಿ ರೂ. ವೆಚ್ಚದಲ್ಲಿ ಅನುಭವ ಮಂಟಪ:
ಜಗತ್ತಿಗೆ ಸಂಸತ್ತಿನ ಪರಿಕಲ್ಪನೆಯನ್ನು ಕಟ್ಟಿಕೊಟ್ಟಿದ್ದೇ ಬಸವಾದಿ ಶರಣರ 770 ಅಮರಗಣಂಗಳ ಅನುಭವ ಮಂಟಪ. ಇಲ್ಲಿ ಮಹಿಳೆಯರಿಗೂ ಸ್ಥಾನ ಮಾನ ಕಲ್ಪಿಸಲಾಗಿತ್ತು. 12ನೇ ಶತಮಾನದಲ್ಲೇ ನಮ್ಮ ಶರಣರು ಸಮಾನತೆಯನ್ನು ಕಾರ್ಯಗತ ಮಾಡಿದ್ದರು. ಈಗ ಬಸವ ಕಲ್ಯಾಣದಲ್ಲಿ 700 ಕೋಟಿ ರೂ. ವೆಚ್ಚದಲ್ಲಿ ಭವ್ಯ, ದಿವ್ಯ ಅನುಭವ ಮಂಟಪ ನಿರ್ಮಾಣ ಕಾರ್ಯ ಭರದಿಂದ ನಡೆಯುತ್ತಿದೆ ಎಂಕಾದರು.
ಭಾಲ್ಕಿ ಹಿರೇಮಠದ ಪರಮಪೂಜ್ಯ ಚನ್ನಬಸವ ಪಟ್ಟದ್ದೇವರು ಆಧುನಿಕ ಅನುಭವ ಮಂಟಪದ ನಿರ್ಮಾಣಕ್ಕೆ ನಾಂದಿ ಹಾಡಿದ್ದರು. ಈ ಹಿಂದೆ 2013ರಿಂದ 2018ರ ಅವಧಿಯಲ್ಲಿ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯನವರು ಆಧುನಿಕ ಅನುಭವ ಮಂಟಪ ನಿರ್ಮಾಣಕ್ಕೆ ಸಮ್ಮತಿಸಿ ಹಣ ಬಿಡುಗಡೆ ಮಾಡಿದ್ದರು. ಇತ್ತೀಚೆಗೆ ಬೀದರ್ ಗೆ ಬಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇನ್ನೂ 400 ಕೋಟಿ ರೂ. ಅನುದಾನ ನೀಡಿ ಮುಂದಿನ ವರ್ಷದೊಳಗೆ ಈ ಅನುಭವ ಮಂಟಪ ಪೂರ್ಣಗೊಳಿಸುವ ಭರವಸೆ ನೀಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ತೇಜೂರು ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಮಠದ ಶ್ರೀ ಕಲ್ಯಾಣ ಸ್ವಾಮೀಜಿ, ಶ್ರೀ ರಾಜಾಪುರ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ, ಮಲ್ಲದೇವರಪುರ ವಿರಕ್ತ ಮಠದ ಶ್ರೀ ಮಹಾಂತ ಬಸವಲಿಂಗ ಸ್ವಾಮೀಜಿ ಮತ್ತಿತರರು ಪಾಲ್ಗೊಂಡಿದ್ದರು.