ನೀರಾವರಿ ವಂಚಿತ ಬೆಳಗಾವಿ ತರಕಾರಿ ರೈತರು: ಹೋರಾಟದ ಎಚ್ಚರಿಕೆ!

Pratibha Boi
ನೀರಾವರಿ ವಂಚಿತ ಬೆಳಗಾವಿ ತರಕಾರಿ ರೈತರು: ಹೋರಾಟದ ಎಚ್ಚರಿಕೆ!
WhatsApp Group Join Now
Telegram Group Join Now
ಬೆಳಗಾವಿ: (ಡಿ.11) ರಾಜ್ಯದ ಅತಿ ಹೆಚ್ಚು ತರಕಾರಿ ಉತ್ಪಾದಿಸುವ ಪ್ರದೇಶಗಳಲ್ಲಿ ಒಂದಾದ ಬೆಳಗಾವಿ ಜಿಲ್ಲೆಯ ಖಾನಾಪುರ, ಕಿತ್ತೂರು, ಮತ್ತು ಬೈಲಹೊಂಗಲ ತಾಲ್ಲೂಕುಗಳ ರೈತರಿಗೆ ಸತತ ಎರಡು ವರ್ಷಗಳಿಂದ ಹನಿ ನೀರಾವರಿ ಸೌಲಭ್ಯದ ಕಾರ್ಯಾದೇಶಗಳನ್ನು ನೀಡದಿರುವ ಕುರಿತು ‘ನೇಗಿಲ ಯೋಗಿ ರೈತ ಸೇವಾ ಸಂಘ’ವು  ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಈ ಮೂರೂ ಹಿಂದುಳಿದ ತಾಲ್ಲೂಕುಗಳಲ್ಲಿ ಸುಮಾರು 10,000 ರಿಂದ  15,000 ಹೆಕ್ಟೇರ್‌ ಪ್ರದೇಶದಲ್ಲಿ ತರಕಾರಿ ಬೆಳೆಯಲಾಗುತ್ತದೆ. ಇಲ್ಲಿನ ಉತ್ಪನ್ನಗಳು ಹೈದರಾಬಾದ್, ಕೊಲ್ಲಾಪುರ, ಬಾಗಲಕೋಟೆಯಂತಹ ರಾಜ್ಯದ ಹಾಗೂ ಹೊರರಾಜ್ಯದ ಮಾರುಕಟ್ಟೆಗಳಿಗೆ ಮತ್ತು ವಿದೇಶಗಳಿಗೂ ರಫ್ತಾಗುತ್ತವೆ. ಈ ಪ್ರದೇಶದ ರೈತರು ತಮ್ಮ ಜೀವನಕ್ಕಾಗಿ ಸಂಪೂರ್ಣವಾಗಿ ತರಕಾರಿ ಬೆಳೆಯನ್ನೇ ಅವಲಂಬಿಸಿದ್ದಾರೆ.
ಪ್ರತಿ ಎಕರೆಗೆ ₹40,000 ದಿಂದ ₹50,000  ಖರ್ಚು ಮಾಡಿ, ಡಿಸೆಂಬರ್-ಜನವರಿಯಲ್ಲಿ ತರಕಾರಿ ಸಸಿಗಳನ್ನು ನಾಟಿ ಮಾಡುವ ಹಂತದಲ್ಲಿ, ರೈತರಿಗೆ ನೀರಿನ ಅಭಾವ ಮತ್ತು ಕಾರ್ಮಿಕರ ಕೊರತೆಯು ತೀವ್ರ ಸವಾಲಾಗಿ ಪರಿಣಮಿಸಿದೆ. ಈ ಸಮಸ್ಯೆಗಳಿಗೆ ಹನಿ ನೀರಾವರಿ ಪದ್ಧತಿಯೇ ಪರಿಹಾರವಾಗಿದ್ದು, ಇದರಿಂದ ನೀರಿನ ಉಳಿತಾಯ, ಕಳೆ ನಿಯಂತ್ರಣ ಮತ್ತು ರಸಾವರಿ  ಮೂಲಕ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯವಾಗುತ್ತದೆ. ಆದರೆ, ಸಂಘದ ಅಧ್ಯಕ್ಷ  ರವಿ ಪಾಟೀಲ ಹಾಗೂ ಪದಾಧಿಕಾರಿಗಳಾದ ಕಲ್ಲಪ್ಪ ಹರಿಯಾಲ, ಸೋಮನಿಂಗ ಮಳ್ಳಿಕೇರಿ ಮತ್ತು ಮನೋಹರ್‌ ಸುಳೇಭಾವಿಕರ ಅವರು ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ, ೨೦೨೪-೨೫ ಹಾಗೂ ೨೦೨೫-೨೬ನೇ ಸಾಲುಗಳಲ್ಲಿ ಹನಿ ನೀರಾವರಿ ಯೋಜನೆಗೆ ಸಲ್ಲಿಸಿದ ಅರ್ಜಿಗಳಿಗೆ ಯಾವುದೇ ಕಾರ್ಯಾದೇಶ  ನೀಡಲಾಗಿಲ್ಲ ಎಂದು ಆರೋಪಿಸಿದ್ದಾರೆ.
 ಜೊತೆಗೆ, ಹೊಸ ತಾಂತ್ರಿಕತೆಗಳು ಮತ್ತು ಪ್ಲಾಸ್ಟಿಕ್ ಹೊದಿಕೆಯಂತಹ ಇತರ ಸೌಲಭ್ಯಗಳನ್ನೂ ನೀಡದೆ ಸರ್ಕಾರವು ಈ ಪ್ರದೇಶದ ರೈತರನ್ನು ಕಡೆಗಣಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಇತ್ತೀಚಿನ ದಿನಗಳಲ್ಲಿ ಚುನಾಯಿತ ಸರ್ಕಾರಗಳು ರೈತ ಮತ್ತು ಬಡ ವರ್ಗದವರನ್ನು ಕಡೆಗಣಿಸುತ್ತಿರುವುದು ಖಂಡನೀಯ,” ಎಂದು ಸಂಘವು ತೀವ್ರ ಎಚ್ಚರಿಕೆ ನೀಡಿದೆ. ತಕ್ಷಣವೇ ನಿಗದಿಪಡಿಸಿದ ಗುರಿಗಳ ಅನ್ವಯ ಕಾರ್ಯಾದೇಶಗಳನ್ನು ನೀಡಿ, ಹೆಚ್ಚಿನ ಅನುದಾನ ಒದಗಿಸಿ ರೈತರನ್ನು ಸಬಲೀಕರಣಗೊಳಿಸಬೇಕು. ಇಲ್ಲವಾದಲ್ಲಿ, “ಮುಂದಿನ ದಿನಗಳಲ್ಲಿ ಉಗ್ರ ಹೋರಾಟದ ನಿರ್ಣಯಗಳನ್ನು ಕೈಗೊಳ್ಳಬೇಕಾಗುತ್ತದೆ,” ಎಂದು ನೇಗಿಲ ಯೋಗಿ ರೈತ ಸೇವಾ ಸಂಘವು ರಾಜ್ಯ ಸರ್ಕಾರವನ್ನು ಎಚ್ಚರಿಸಿದೆ.
WhatsApp Group Join Now
Telegram Group Join Now
Share This Article