ಬೆಂಗಳೂರು: ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶ ‘ಇನ್ವೆಸ್ಟ್ ಕರ್ನಾಟಕ 2025’ರಲ್ಲಿ 18 ದೇಶಗಳ ಹೂಡಿಕೆದಾರರು ಭಾಗವಹಿಸಲಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೋಮವಾರ ಹೇಳಿದ್ದಾರೆ.
ಪೂರ್ವಭಾವಿ ಸಿದ್ಧತಾ ಪರಿಶೀಲನಾ ಸಭೆಯ ನಂತರ ಮಾತನಾಡಿದ ಅವರು, ಫೆಬ್ರವರಿ 11 ರಂದು ಸಂಜೆ ಔಪಚಾರಿಕ ಉದ್ಘಾಟನೆ ನಂತರ ಫೆಬ್ರವರಿ 12 ರಿಂದ ಮೂರು ದಿನಗಳ ಕಾಲ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಯಲಿದ್ದು, 10 ಲಕ್ಷ ಕೋಟಿ ರೂ. ಹೂಡಿಕೆ ಪ್ರಸ್ತಾವನೆ ಆಕರ್ಷಿಸುವ ನಿರೀಕ್ಷೆಯಿದೆ ಎಂದರು.
2,000 ಹೂಡಿಕೆದಾರರು ಈಗಾಗಲೇ ನೋಂದಾಯಿಸಿಕೊಂಡಿದ್ದಾರೆ ಮತ್ತು 60 ಕ್ಕೂ ಹೆಚ್ಚು ಉದ್ಯಮ ತಜ್ಞರು ಸಭೆಯಲ್ಲಿ ಮಾತನಾಡಲಿದ್ದಾರೆ. 18 ದೇಶಗಳಲ್ಲಿ, ಒಂಬತ್ತು ಪ್ರತ್ಯೇಕ ಪೆವಿಲಿಯನ್ಗಳನ್ನು ಹೊಂದಿರುತ್ತವೆ. ಹೂಡಿಕೆದಾರರಿಗೆ ವಿವಿಧ ಹೂಡಿಕೆ ಅವಕಾಶಗಳು ಮತ್ತು ಉದ್ಯಮ ಸ್ನೇಹಿ ನೀತಿಗಳನ್ನು ಸರ್ಕಾರ ವಿವರಿಸುತ್ತದೆ ಎಂದು ಹೇಳಿದರು.
ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರು ಹಲವು ತಿಂಗಳುಗಳಿಂದ ಈ ಸಮಾವೇಶಕ್ಕಾಗಿ ಕೆಲಸ ಮಾಡುತ್ತಿದ್ದಾರೆ ಮತ್ತು ಯುಎಸ್, ಯುರೋಪ್, ದಕ್ಷಿಣ ಕೊರಿಯಾ, ಜಪಾನ್ ಮತ್ತು ಇತರ ಹಲವು ದೇಶಗಳಿಗೆ ನಿಯೋಗ ಕಳುಹಿಸಿ,ರೋಡ್ ಶೋಗಳಲ್ಲಿ ಭಾಗವಹಿಸಿದ್ದು, ಹೂಡಿಕೆದಾರರೊಂದಿಗೆ ಹಲವಾರು ಸಭೆಗಳನ್ನು ನಡೆಸಿದ್ದಾರೆ ಎಂದು ತಿಳಿಸಿದರು.
ಎಂ.ಬಿ. ಪಾಟೀಲ್ ಮಾತನಾಡಿ, – ಟೆಕ್-ಚಾಲಿತ, ಹಸಿರು, ಅಂತರ್ಗತ ಮತ್ತು ಸ್ಥಿತಿಸ್ಥಾಪಕ ಬೆಳವಣಿಗೆ ಗಮನದಲ್ಲಿಟ್ಟುಕೊಂಡು ಈ ಸಮಾವೇಶದ ಥೀಮ್ ಸಿದ್ದಪಡಿಸಲಾಗಿದೆ. ದಾವೋಸ್ನಲ್ಲಿನ ವಿಶ್ವ ಆರ್ಥಿಕ ವೇದಿಕೆಯಿಂದ (WEF) ಸ್ಫೂರ್ತಿ ಪಡೆದು, ಹೊಸ ನೀತಿಗಳು ಮತ್ತು ಕಾರ್ಯಕ್ರಮಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.