ಬಳ್ಳಾರಿ: 15.ಅಸ್ಪೃಶ್ಯ ಅಲೆಮಾರಿ ಸಮುದಾಯಗಳಿಗೆ ಒಳಮೀಸಲಾತಿಯಲ್ಲೇ ಪ್ರತ್ಯೇಕವಾಗಿ ಎ–ಗ್ರೂಪ್ ಗುರುತಿಸಿ ಕಾನೂನು ಜಾರಿಗೊಳಿಸಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಲು ಇದೇ ಡಿ.೧೯ ರಂದು ಬೆಳಗಾವಿ ಸುವರ್ಣಸೌಧ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ಅಲೆಮಾರಿ ಸಮುದಾಯಗಳ ಜಿಲ್ಲಾಧ್ಯಕ್ಷ ಶಿವಕುಮಾರ್ ತಿಳಿಸಿದರು.
ಇಲ್ಲಿನ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, 59 ಅಲೆಮಾರಿ ಸಮುದಾಯಗಳಿಗೆ 1 ಶೇಕಡಾ ಮೀಸಲಾತಿಯನ್ನು ಪ್ರತ್ಯೇಕವಾಗಿ ಎ–ಗ್ರೂಪ್‌ನಲ್ಲಿ ಗುರುತಿಸಿ ಕಾನೂನು ಭದ್ರತೆ ನೀಡಬೇಕು. ನ್ಯಾಯಾಲಯಕ್ಕೆ ಸಲ್ಲಿಸಿರುವ ಅಫಿಡವಿಟ್ ಹಿಂಪಡೆದು, ಮೀಸಲಾತಿ ನೀಡುವುದಾಗಿ ನ್ಯಾಯಾಲಯದಲ್ಲಿ ಸರ್ಕಾರ ಸ್ಪಷ್ಟ ಒಪ್ಪಿಗೆ ನೀಡಬೇಕು. ಅಲೆಮಾರಿ ಸಮುದಾಯಗಳಿಗೆ ಭಾರತದಲ್ಲೇ ಮಾದರಿಯಾಗುವಂತಹ ವಿಶೇಷ ಪ್ಯಾಕೇಜ್ ಘೋಷಿಸಬೇಕು. 49 ನೈಜ ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕ ನಿಗಮ ಸ್ಥಾಪಿಸಬೇಕು ಎನ್ನುವುದು ಸೇರಿದಂತೆ ಹಲವಾರು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟ ಮಾಡುವುದಾಗಿ ಹೇಳಿದರು.
ಕರ್ನಾಟಕ ಸರ್ಕಾರದ ಕ್ಯಾಬಿನೆಟ್ ಸಭೆಯಲ್ಲಿ ಒಳಮೀಸಲಾತಿಗೆ ಕಾನೂನು ತರಲಾಗುವುದು ಎಂದು ಸದನದಲ್ಲಿ ಹೇಳಿದ್ದರೂ, ಅಲೆಮಾರಿ ಸಮುದಾಯಗಳಿಗೆ ಆಗುತ್ತಿರುವ ಚಾರಿತ್ರಿಕ ಅನ್ಯಾಯವನ್ನು ಸರಿಪಡಿಸುವಲ್ಲಿ ಸರ್ಕಾರ ವಿಫಲವಾಗಿದೆ. ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಸರ್ಕಾರವೇ ರಚಿಸಿದ್ದ ಏಕಸದಸ್ಯ ಆಯೋಗದ ನಿವೃತ್ತ ನ್ಯಾಯಮೂರ್ತಿ ಡಾ. ನಾಗಮೋಹನ್ ದಾಸ್ ಅವರ ಆಯೋಗವು ಸಮೀಕ್ಷೆ ನಡೆಸಿತ್ತು. 49 ಅಲೆಮಾರಿ ಸಮುದಾಯಗಳು ಹಾಗೂ 10 ಸೂಕ್ಷ್ಮ ಸಮುದಾಯಗಳನ್ನು ಗುರುತಿಸಿ, ಹಿಂದುಳಿದ ಅಸ್ಪೃಶ್ಯ ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕವಾಗಿ ಎ–ಗ್ರೂಪ್ ಶಿಫಾರಸು ಮಾಡಿತ್ತು. ಆದರೆ ಆಯೋಗದ ವರದಿ ಸಲ್ಲಿಸಿದ ಬಳಿಕ ರಾಜಕೀಯ ಒತ್ತಡಕ್ಕೆ ಒಳಗಾಗಿ ಸರ್ಕಾರವು ಆ ವರದಿಯನ್ನು ನಿರ್ಲಕ್ಷಿಸಿ, ಸುಪ್ರೀಂ ಕೋರ್ಟ್ ಆದೇಶಕ್ಕೂ ವಿರುದ್ಧವಾಗಿ ಅಲೆಮಾರಿ ಸಮುದಾಯಗಳಿಗೆ ಅನ್ಯಾಯ ಮಾಡಿದೆ. ಈ ಅನ್ಯಾಯವನ್ನು ಸರಿಪಡಿಸಲು ತಕ್ಷಣವೇ ಮತ್ತೊಮ್ಮೆ ಕ್ಯಾಬಿನೆಟ್ ಸಭೆ ನಡೆಸಿ, ಅಲೆಮಾರಿ ಸಮುದಾಯಗಳಿಗೆ ಅನ್ಯಾಯವಾಗದಂತೆ 1 ಶೇಕಡಾ ಮೀಸಲಾತಿಯನ್ನು ಪ್ರತ್ಯೇಕವಾಗಿ ಜಾರಿಗೆ ತರಬೇಕೆಂದು ಒತ್ತಾಯಿಸಿ ಬೆಳಗಾವಿ ಚಲೋ ಹಮ್ಮಿಕೊಂಡಿರುವುದಾಗಿ ಹೇಳಿದರು.
ಅಲೆಮಾರಿ ಸಮುದಾಯಗಳ ಸಂಘಟನೆಗಳ ಮುಖಂಡರಾದ ಸುಬ್ಬಣ್ಣ, ಕಲ್ಯಾಣಂ ಶಂಕರ್, ಮಹೇಶ್, ಗುಂಡಪ್ಪ ಕಟ್ಟಿಮನಿ, ರಾಮಾಂಜಿನಿ, ಡಿ. ಬಾಬು ಸೇರಿದಂತೆ ಇತರೆ ಮುಖಂಡರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.


