ಬೆಂಗಳೂರು: ಕರ್ನಾಟಕ ಲೋಕಾಯುಕ್ತ ಪೊಲೀಸರು ನಗರದ ಕೆಂಪೇಗೌಡ ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶಿವಾಜಿ ರಾವ್ ಮತ್ತು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಶಿವಾನಂದ್ ಅವರನ್ನು 1 ಲಕ್ಷ ರೂ. ಲಂಚದೊಂದಿಗೆ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಉದ್ಯಮಿಯೊಬ್ಬರು ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣವೊಂದರಲ್ಲಿ ಅವರ ಹೆಸರನ್ನು ಕೈಬಿಡಲು ಪೊಲೀಸರು ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಆವಲಹಳ್ಳಿ ನಿವಾಸಿ ಕೇಶವಮೂರ್ತಿ ಎಂಬುವವರು ಫೆಬ್ರವರಿ 2025ರಲ್ಲಿ ಕೆಂಪೇಗೌಡ ನಗರ ಠಾಣೆಯಲ್ಲಿ ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಕೈಬಿಡಲು ಆರೋಪಿ ಪೊಲೀಸ್ ಅಧಿಕಾರಿಗಳು ಬೇಡಿಕೆ ಇಟ್ಟಿದ್ದ 6 ಲಕ್ಷ ರೂ. ಲಂಚವನ್ನು ಕೊಡಲು ಸಾಧ್ಯವಾಗದೆ ಲೋಕಾಯುಕ್ತ ಪೊಲೀಸರನ್ನು ಸಂಪರ್ಕಿಸಿದ್ದರು. ಭ್ರಷ್ಟಾಚಾರ ತಡೆ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಅಪರಾಧವನ್ನು ದಾಖಲಿಸಿದ ನಂತರ ಲೋಕಾಯುಕ್ತ ಪೊಲೀಸರು ಬಲೆ ಬೀಸಿದರು. ಅದರಂತೆ ಇನ್ಸ್‌ಪೆಕ್ಟರ್ ಶಿವಾಜಿ ರಾವ್ ಮತ್ತು ಸಬ್ ಇನ್ಸ್‌ಪೆಕ್ಟರ್ ಶಿವಾನಂದ್ ಇಬ್ಬರನ್ನೂ 1 ಲಕ್ಷ ರೂ. ಲಂಚದೊಂದಿಗೆ ಬಂಧಿಸಿದ್ದಾರೆ.