ಬೆಂಗಳೂರು: ಕಳೆದ ಜೂನ್ 4 ಕರ್ನಾಟಕದ ಇತಿಹಾಸದಲ್ಲಿ ಕರಾಳ ಅಧ್ಯಾಯದ ದಿನ. ಕ್ರಿಕೆಟ್ ಅಭಿಮಾನದ ಲಾಭ ಗಳಿಸುವ ಸ್ವಾರ್ಥದ ದುರಾಲೋಚನೆಯಿಂದ ಮುಖ್ಯಮಂತ್ರಿಗಳು ಮತ್ತು ಕಾಂಗ್ರೆಸ್ ಸರ್ಕಾರ ತೆಗೆದುಕೊಂಡ ಬೇಜವಾಬ್ದಾರಿ ಹಾಗೂ ಹೊಣೆಗೇಡಿತನದ ನಿರ್ಧಾರದಿಂದಾಗಿ ಅಮಾಯಕ ಯುವಜೀವಗಳು ಬಲಿಯಾಗಿವೆ, ಜಮಾವಣೆಗೊಂಡಿದ್ದ ಸಾವಿರಾರು ಜನರು ನೋವು-ಸಂಕಷ್ಟವನ್ನು ಅನುಭವಿಸಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದ್ದಾರೆ.
ಈ ಸಂಬಂಧ ವಿಜಯೇಂದ್ರ ಪತ್ರ ಬರೆದಿದ್ದಾರೆ. ಕಳೆದ ಜೂನ್ 4 ಕರ್ನಾಟಕದ ಇತಿಹಾಸದಲ್ಲಿ ಕರಾಳ ಅಧ್ಯಾಯದ ದಿನ. ಕ್ರಿಕೆಟ್ ಅಭಿಮಾನದ ಲಾಭ ಗಳಿಸುವ ಸ್ವಾರ್ಥದ ದುರಾಲೋಚನೆಯಿಂದ ನೀವು ಮತ್ತು ನಿಮ್ಮ ಸರ್ಕಾರ ತೆಗೆದುಕೊಂಡ ಬೇಜವಾಬ್ದಾರಿ ಹಾಗೂ ಹೊಣೆಗೇಡಿತನದ ನಿರ್ಧಾರದಿಂದಾಗಿ ಅಮಾಯಕ ಯುವಜೀವಗಳು ಬಲಿಯಾಗಿವೆ. ಜಮಾವಣೆಗೊಂಡಿದ್ದ ಸಾವಿರಾರು ಜನರು ನೋವು-ಸಂಕಷ್ಟವನ್ನು ಅನುಭವಿಸಿದ್ದಾರೆ. ಕುಟುಂಬ ಬೆಳಗಬೇಕಿದ್ದ, ಉಜ್ವಲ ಭವಿಷ್ಯದ ಕನಸು ಕಂಡಿದ್ದ 11 ಯುವ ಜನರ ಸಾವು ಆ ಕುಟುಂಬಗಳ ನೆಮ್ಮದಿಯನ್ನು ಕಿತ್ತುಕೊಂಡು ಹೆತ್ತವರು ನಿತ್ಯ ಕಣ್ಣೀರಿಡುವಂತಾಗಿದೆ. ಇಡೀ ಘಟನೆಯಿಂದಾಗಿ ಈ ಕ್ಷಣಕ್ಕೂ ಇಡೀ ರಾಜ್ಯ ಮಮ್ಮಲ ಮರುಗುತ್ತಿದೆ.
ರಾಷ್ಟ್ರ-ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರಿನ ಘಟನೆ ಕರ್ನಾಟಕದ ಘನತೆಗೆ ಕಪ್ಪು ಮಸಿ ಬಳಿದಿದೆ, ನಮ್ಮ ರಾಜ್ಯ ಅಸುರಕ್ಷತೆಯ ತಾಣ ಎಂಬ ಸಂದೇಶ ರವಾನೆಯಾಗಿದೆ. ಇಷ್ಟಾಗಿಯೂ ಸರ್ಕಾರಕ್ಕೂ ಈ ಘಟನೆಗೂ ಏನೇನೂ ಸಂಬಂಧವಿಲ್ಲ, ಸರ್ಕಾರ ಈ ಘಟನೆಯ ಜವಾಬ್ದಾರಿಯನ್ನು ಹೊರಲಾಗದು ಎಂಬ ನಿಮ್ಮ ಹೇಳಿಕೆ ಪಲಾಯನವಾದ ಹಾಗೂ ನಿರ್ಲಜ್ಜತನದ ಹೊಣೆಗೇಡಿತನವನ್ನು ಪ್ರತಿಬಿಂಬಿಸುತ್ತಿದೆ. ಅಧಿಕಾರಕ್ಕೆ ಅಂಟಿಕೊಳ್ಳುವ ಭಂಡತನದ ನಿಮ್ಮ ನಡೆ ಪರಂಪರೆಯ ಕರ್ನಾಟಕದ ನೈತಿಕ ರಾಜಕಾರಣವನ್ನು ಅವಮಾನಿಸುತ್ತಿದೆ.