ಮೈಸೂರು, ಜನವರಿ 3: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರ ವರುಣಾ ವ್ಯಾಪ್ತಿಯಲ್ಲಿ ಬರುವ ಸಿದ್ದರಾಮಯ್ಯಹುಂಡಿ ಗ್ರಾಮದ ಬಳಿಯ ಶ್ರೀನಿವಾಸಪುರ ಗ್ರಾಮದಲ್ಲಿ ಕುಟುಂಬವೊಂದಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿರುವ ಘಟನೆ ವರದಿಯಾಗಿದೆ. ಗ್ರಾಮದ ಯಜಮಾನರು ದಲಿತ ಸಮುದಾಯದ ಕುಟುಂಬಕ್ಕೆ ಬಹಿಷ್ಕಾರ ಹಾಕಿದ್ದಾರೆ. ಸುರೇಶ್ ಎಂಬವರ ಕುಟುಂಬಕ್ಕೆ ಗ್ರಾಮದ ಯಜಮಾನರಾದ ಚಿಕ್ಕಂಡಯ್ಯ, ಬಸವಯ್ಯ, ಮೋಟ ಮಹದೇವಯ್ಯ, ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಮಹದೇವ್ ಬಹಿಷ್ಕಾರ ಹಾಕಿದ್ದಾರೆ.
ಆದರೆ, ನ್ಯಾಯ ಪಂಚಾಯಿತಿ ಬಗ್ಗೆ ತಗಾದೆ ತೆಗೆದಿದ್ದ ಸುರೇಶ್, ತಮಗೆ ಅನ್ಯಾಯವಾಗಿದ್ದರಿಂದ ದಂಡದ ಮೊತ್ತ ಪಾವತಿಸುವುದಿಲ್ಲ ಎಂದು ಹೇಳಿದ್ದರು. ಇದರಿಂದ ಕೆರಳಿದ ಯಜಮಾನರು, ನ್ಯಾಯ ಪಂಚಾಯಿತಿ ವಿಚಾರದಲ್ಲಿ ತಮಗೆ ಮುಜುಗರ ಆಗಿದೆ ಎಂದು ಸುರೇಶ್ ಮೇಲೆ ಸಿಟ್ಟಾಗಿದ್ದಾರೆ. ಅದೇ ಕೋಪದಲ್ಲಿ, ತಪ್ಪು ಕಾಣಿಕೆ ಕಟ್ಟುವವರೆಗೂ ತಮ್ಮ ಕುಲಕ್ಕೆ ಸೇರಿಸುವುದಿಲ್ಲ ಎಂದು ಬಹಿಷ್ಕಾರ ಹಾಕಿದ್ದಾರೆ.
ಸುರೇಶ್ ಹಾಗೂ ಅವರ ತಾಯಿ ಮಹದೇವಮ್ಮ ಇಬ್ಬರನ್ನು ಗ್ರಾಮಸ್ಥರು ಹೊರಗಿಟ್ಟಿದ್ದಾರೆ. ಹಬ್ಬ, ಸಾವು-ನೋವುಗಳ ಆಚರಣೆ ವಿಚಾರದಲ್ಲೂ ಬಹಿಷ್ಕಾರ ಹಾಕಲಾಗಿದೆ. ಈ ವಿಚಾರವಾಗಿ ಜಿಲ್ಲಾಧಿಕಾರಿ, ಪೊಲೀಸರು, ತಹಶೀಲ್ದಾರ್ಗೆ ಈಗಾಗಲೇ ದೂರು ನೀಡಿದ್ದರೂ ಸಂತ್ರಸ್ತರಿಗೆ ನ್ಯಾಯ ಸಿಕ್ಕಿಲ್ಲ. ಸುರೇಶ್ ಕುಟುಂಬದ ಜೊತೆ ಯಾರೇ ಸಂಪರ್ಕಕ್ಕೆ ಬಂದರೂ 5,000 ರೂ. ದಂಡ ವಿಧಿಸಬೇಕು ಎಂದು ಗ್ರಾಮದ ಯಜಮಾನರು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.