ದೇಶದ ಎರಡನೇ ಅತಿ ದೊಡ್ಡ ಐಟಿ ಕಂಪನಿ ಇನ್ಫೋಸಿಸ್ ಉದ್ಯೋಗ ಆಕಾಂಕ್ಷಿಗಳು ಹಾಗೂ ತನ್ನ ಉದ್ಯೋಗಿಗಳಿಗೆ ಗುರುವಾರ ಸಿಹಿ ಸುದ್ದಿ ನೀಡಿದೆ. ಹಾಲಿ ಆರ್ಥಿಕ ವರ್ಷದಲ್ಲಿ 20,000 ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವುದಾಗಿ ಹೇಳಿದೆ. ಅಲ್ಲದೆ ನಿಗದಿಯಂತೆ ವೇತನ ಹೆಚ್ಚಳವನ್ನು ಪ್ರಾರಂಭಿಸಿರುವುದಾಗಿ ತಿಳಿಸಿದೆ.
ದೇಶದ ಇನ್ನೆರಡು ಪ್ರಮುಖ ಐಟಿ ಕಂಪನಿಗಳಾದ ಟಿಸಿಎಸ್ ಮತ್ತು ವಿಪ್ರೋ ವೇತನ ಹೆಚ್ಚಳದ ಬಗ್ಗೆ ಎಚ್ಚರಿಕೆ ಹೆಜ್ಜೆ ಇರಿಸಿವೆ. ಆದರೆ ಇನ್ಫೋಸಿಸ್ 2026ನೇ ಆರ್ಥಿಕ ವರ್ಷಕ್ಕೆ ವೇತನ ಹೆಚ್ಚಳವನ್ನು ಪ್ರಾರಂಭಿಸಿರುವುದಾಗಿ ಹೇಳಿದೆ. ಮಾರ್ಚ್‌ಗೆ ಕೊನೆಗೊಂಡ ನಾಲ್ಕನೇ ತ್ರೈಮಾಸಿಕದಲ್ಲಿ ಕಂಪನಿಯ ಲಾಭ ಶೇ. 12ರಷ್ಟು ಕುಸಿತ ಕಂಡಿದ್ದರೂ ಕಂಪನಿ ಈ ನಿರ್ಧಾರ ಘೋಷಿಸಿದೆ.
2024-25ರಲ್ಲಿ 15,000-20,000 ಹೊಸ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವ ಗುರಿಯನ್ನು ತಲುಪಿರುವುದಾಗಿ ಕಂಪನಿ ಹೇಳಿದೆ. ಇದೀಗ 2025-26ರಲ್ಲಿ 20,000 ಹೊಸಬರನ್ನು ನೇಮಕ ಮಾಡಿಕೊಳ್ಳುವುದಾಗಿ ಹೇಳಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಂಕದಿಂದಾಗಿ ಆರ್ಥಿಕ ಅನಿಶ್ಚಿತತೆ ಉಂಟಾಗಿರುವ ನಡುವೆಯೂ ಕಂಪನಿ ಈ ತೀರ್ಮಾನಕ್ಕೆ ಬಂದಿದೆ.
“ನಾವು ವೇತನ ಹೆಚ್ಚಳದ ಹಾದಿಯಲ್ಲಿ ಇದ್ದೇವೆ. ಹೆಚ್ಚಿನ ವೇತನ ಹೆಚ್ಚಳವನ್ನು ಜನವರಿಯಲ್ಲಿ ನೀಡಲಾಗಿದೆ. ಉಳಿದ ಸಂಬಳ ಏರಿಕೆಯನ್ನು ಏಪ್ರಿಲ್ 1 ರಿಂದ ಜಾರಿಗೆ ತರಲಾಗುವುದು. 2026ನೇ ಆರ್ಥಿಕ ವರ್ಷದಲ್ಲಿ 20,000ಕ್ಕೂ ಹೆಚ್ಚು ಹೊಸ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ನಾವು ಯೋಜಿಸಿದ್ದೇವೆ,” ಎಂದು ಕಂಪನಿಯ ಹಣಕಾಸು ಅಧಿಕಾರಿ ಜಯೇಶ್ ಸಂಘರಾಜ್ಕಾ ಹೇಳಿದ್ದಾರೆ.