ಹುಬ್ಬಳ್ಳಿ, ಆಗಸ್ಟ್ 07: ಇನ್ಫೋಸಿಸ್ (Infosys) ಸಂಸ್ಥೆ ಹುಬ್ಬಳ್ಳಿಯಲ್ಲಿ ಅತ್ಯಾಧುನಿಕ ಎಐ (AI), ಸೈಬರ್ ಸೆಕ್ಯುರಿಟಿ ಮತ್ತು ಸ್ಪೇಸ್‌ಟೆಕ್ ಕೇಂದ್ರವನ್ನು ಪ್ರಾರಂಭಿಸಿದೆ. ಈ ಅತ್ಯಾಧುನಿಕ ಕೇಂದ್ರವನ್ನು ಕರ್ನಾಟಕದ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂಬಿ ಪಾಟೀಲ್ ಮತ್ತು ಐಟಿ -ಬಿಟಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಬುಧವಾರ ಉದ್ಘಾಟಿಸಿದರು. ‘ಇನ್ಫೋಸಿಸ್ ಲಿವಿಂಗ್ ಲ್ಯಾಬ್ಸ್’ ಹುಬ್ಬಳ್ಳಿ -ಧಾರವಾಢ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಇನ್ನಷ್ಟು ಐಟಿ ಕಂಪೆನಿಗಳು ನೆಲಗೊಳ್ಳಲು ಪ್ರೇರಣೆ ಆಗಲಿದೆ.
ಹುಬ್ಬಳ್ಳಿಯಲ್ಲಿ ಇನ್ಫೋಸಿಸ್ ಅಡ್ವಾನ್ಸ್ಡ್ ಟೆಕ್ ಸೆಂಟರ್ ಅನಾವರಣ

ಹುಬ್ಬಳ್ಳಿಯಲ್ಲಿ ಪ್ರಾರಂಭವಾಗಿರುವ ಈ ಅತ್ಯಾಧುನಿಕ ಕೇಂದ್ರವು ಎಐ, ಕ್ಲೌಡ್ ಕಂಪ್ಯೂಟಿಂಗ್, ಸೈಬರ್ ಭದ್ರತೆ, ಎಂಜಿನಿಯರಿಂಗ್ ಸೇವೆಗಳು, ಎಸ್ಎಪಿ ಮತ್ತು ಬಾಹ್ಯಾಕಾಶ ತಂತ್ರಜ್ಞಾನದಂತಹ ಪ್ರಮುಖ ಕ್ಷೇತ್ರಗಳಲ್ಲಿ ಸುಧಾರಿತ ಡಿಜಿಟಲ್ ಪರಿಹಾರಗಳನ್ನು ಒದಗಿಸುವ ನಿಟ್ಟಿನಲ್ಲಿ ಗಮನಹರಿಸುತ್ತದೆ ಎಂದು ಇನ್ಫೋಸಿಸ್ ತಿಳಿಸಿದೆ.