•ಕ್ಯಾಂಟೀನ್ ಹೊಸ ದರ ಪಟ್ಟಿ ಮತ್ತು ವಿವಿಧ ಆಹಾರಗಳ ಪೂರೈಕೆಗೆ ಚಾಲನೆ
ಧಾರವಾಡ, ಸೆಪ್ಟೆಂಬರ್ 12: ರಾಜ್ಯ ಸರಕಾರವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿ ಬಡವರಿಗೆ, ಕಾರ್ಮಿಕರಿಗೆ, ಹಿಂದುಳಿದವರಿಗೆ ಹಾಗೂ ಎಲ್ಲ ಸಾರ್ವಜನಿಕರಿಗೆ ಇಂದಿರಾ ಕ್ಯಾಂಟೀನ್ ಮೂಲಕ ಕೇವಲ ಐದು ರೂಪಾಯಿಗೆ ಊಟ, ಉಪಹಾರ ನೀಡುತ್ತಿರುವುದು ರಾಷ್ಟ್ರಕ್ಕೆ ಮಾದರಿ ಎಂದು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ನಗರದ ಮಿನಿವಿಧಾನಸೌಧ ಬಳಿ ಇರುವ ಇಂದಿರಾ ಕ್ಯಾಂಟೀನ್‍ದಲ್ಲಿ ಇಂದಿರಾ ಕ್ಯಾಂಟೀನ್ ಹೊಸ ದರ ಪಟ್ಟಿ ಮತ್ತು ವಿವಿಧ ಆಹಾರಗಳ ಪೂರೈಕೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಇಂದಿರಾ ಕ್ಯಾಂಟೀನ್ ರಾಜ್ಯ ಸರಕಾರದ ಮಹತ್ವದ ಕೊಡುಗೆಯಾಗಿದೆ. ಜಿಲ್ಲೆಯ ಅವಳಿ ನಗರದಲ್ಲಿ 9 ಇಂದಿರಾ ಕ್ಯಾಂಟೀನ್‍ಗಳು ಕಾರ್ಯನಿರ್ವಹಿಸುತ್ತಿವೆ. ಪ್ರತಿ ಇಂದಿರಾ ಕ್ಯಾಂಟೀನ್‍ದಿಂದ ಪ್ರತಿದಿನ 500 ಜನರಿಗೆ ಊಟ ಪೂರೈಸುವ ಗುತ್ತಿಗೆ ನೀಡಲಾಗಿದೆ. ಅದರಂತೆ ಇಂದಿರಾ ಕ್ಯಾಂಟೀನ್‍ಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ಅವರು ಹೇಳಿದರು.
ಇಂದಿರಾ ಕ್ಯಾಂಟೀನ್ ರುಚಿ ಸವಿದ ಸಚಿವರು: ಇಂದಿರಾ ಕ್ಯಾಂಟೀನ್‍ದಲ್ಲಿ ಹೊಸ ದರದ ಪಟ್ಟಿ ಬಿಡುಗಡೆ ಮಾಡಿದ ಸಚಿವರು ವಿವಿಧ ಪ್ರಕಾರದ ಉಪಹಾರ ಸೇವಿಸಿದರು. ಐದು ರೂ. ಹಣ ಕೊಟ್ಟು ಟೋಕನ್ ಖರೀದಿಸಿದರು. ನಂತರ ಸಚಿವರು ಜೋಳದ ರೊಟ್ಟಿ ಊಟ ಸವಿದರು.
ಈ ಸಂದರ್ಭದಲ್ಲಿ ನವಲಗುಂದ ಶಾಸಕ ಎನ್.ಎಚ್.ಕೋನರಡ್ಡಿ, ಜಿಲ್ಲಾಧಿಕಾರಿ ದಿವ್ಯ ಪ್ರಭು, ಮಹಾನಗರ ಪಾಲಿಕೆ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಜೀಜ್ ದೇಸಾಯಿ, ಪಾಲಿಕೆ ಸದಸ್ಯ ಡಾ.ಮಯೂರ ಮೋರೆ, ಸೇರಿದಂತೆ ವಿವಿಧ ಅಧಿಕಾರಿಗಳು, ಜನಪ್ರತಿನಿಧಿಗಳು ಇದ್ದರು.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ 9 ಇಂದಿರಾ ಕ್ಯಾಂಟೀನ್‍ಗಳಿಗೆ ಎರಡು ಪ್ಯಾಕೇಜ್‍ಗಳ ಮೂಲಕ ಆಹಾರ ಸರಬರಾಜು ಮಾಡಲಾಗುತ್ತದೆ.