ಶ್ರೀನಗರ, ಜಮ್ಮು ಕಾಶ್ಮೀರ : ಜಮ್ಮು ಪ್ರದೇಶದ ಅಖ್ನೂರ್ ಸೆಕ್ಟರ್‌ನಲ್ಲಿ ಇಂದು ಬೆಳಗ್ಗೆ ಮತ್ತೆ ಗುಂಡಿನ ಚಕಮಕಿ ನಡೆದಿದೆ. ಇಲ್ಲಿನ ಹಳ್ಳಿಯೊಂದರಲ್ಲಿ ಅಡಗಿಕೊಂಡಿದ್ದ ಭಯೋತ್ಪಾದಕರಿಬ್ಬರನ್ನು ಮಂಗಳವಾರ ಬೆಳಗ್ಗೆ ನಡೆದ ಗುಂಡಿನ ಚಕಮಕಿಯಲ್ಲಿ ಭದ್ರತಾ ಪಡೆಗಳು ಹೊಡೆದುರುಳಿಸಿವೆ. ಈ ಬಗ್ಗೆ ಅಧಿಕಾರಿಗಳು ಖಚಿತ ಮಾಹಿತಿ ನೀಡಿದ್ದಾರೆ.
ಒಟ್ಟು ಮೂವರು ಭಯೋತ್ಪಾದಕರು ಹತರಾಗಿದ್ದಾರೆ ಮತ್ತು ಜೋಗ್ವಾನ್ ಗ್ರಾಮದ ಅಸ್ಸಾನ್ ದೇವಸ್ಥಾನದ ಸಮೀಪವಿರುವ ಅರಣ್ಯ ಪ್ರದೇಶದಲ್ಲಿ ಇನ್ನೂ ಅಡಗಿರುವ ಮೂರನೇ ಉಗ್ರನನ್ನು ತಟಸ್ಥಗೊಳಿಸಿದ್ದೇವೆ ಎಂದು ಸೇನೆ ಹೇಳಿದೆ.
ಸೋಮವಾರ ಬೆಳಗ್ಗೆ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ಸಾಗುತ್ತಿದ್ದ ಬೆಂಗಾವಲು ಪಡೆಯ ಭಾಗವಾಗಿದ್ದ ಸೇನಾ ಆಂಬ್ಯುಲೆನ್ಸ್ ಮೇಲೆ ಮೂವರು ಭಯೋತ್ಪಾದಕರ ಗುಂಡು ಹಾರಿಸಿದ್ದರು. ವಿಶೇಷ ಪಡೆಗಳು ಮತ್ತು ಎನ್‌ಎಸ್‌ಜಿ ಕಮಾಂಡೋಗಳು ನಡೆಸಿದ ಕಾರ್ಯಾಚರಣೆಯಲ್ಲಿ ಸೋಮವಾರ ಸಂಜೆ ಉಗ್ರರನೊಬ್ಬನನ್ನು ಹೊಡೆದುರುಳಿಸಲಾಗಿತ್ತು. ಬಳಿಕ ಶೋಧ ಕಾರ್ಯಾಚರಣೆ ಮುಂದುವರಿಸಲಾಗಿತ್ತು. ಇಂದು ಬೆಳಗ್ಗೆ ಭದ್ರತಾ ಪಡೆಗಳು ಖೌರ್‌ನ ಭಟ್ಟಲ್ ಏರಾದಲ್ಲಿ ಬೆಳಗ್ಗೆ 7 ಗಂಟೆಯ ಸುಮಾರಿಗೆ ಅಡಗಿಕೊಂಡಿದ್ದ ಭಯೋತ್ಪಾದಕರ ವಿರುದ್ಧ ಗುಂಡಿನ ದಾಳಿ ನಡೆಸಿ ಹೊಡೆದುರಳಿಸಿತ್ತು. ಅಡಗಿಕೊಂಡಿದ್ದ ಮೂರನೇ ಉಗ್ರನಿಗಾಗಿ ಶೋಧ ಮುಂದುವರಿದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದರು.